ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ತೊರೆದು, ಸ್ವಾವಲಂಬಿ ಜೀವನ ನಡೆಸಲು ಮುಂದಾಗಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೨೫; ಲಿಂಗತ್ವ ಅಲ್ಪಸಂಖ್ಯಾತರು ಭಿಕ್ಷಾಟನೆ ತೊರೆದು ಸ್ವಾಭಿಮಾನ ಹಾಗೂ ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ವಿವಿಧ ಉದ್ಯಮಗಳಲ್ಲಿ ತೊಡಗಬೇಕು. ಇದರಿಂದ ಉದ್ಯೋಗವು ಸೃಷ್ಟಿಯಾಗಲಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪದ್ಮಾವತಿ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಕೊಳಹಾಳ್ ಭರಮಸಾಗರದ ಮಡಿಲು ಸ್ವಾವಲಂಬಿ ಟ್ರಸ್ಟ್‍ನ ಮಂಗಳಮುಖಿಯರು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಪ್ರಾಯೋಜಕತ್ವದಲ್ಲಿ ರೂ.21.23 ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ಕುರಿ ಸಾಕಾಣಿಕೆ ಘಟಕವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಅಭಿವೃದ್ಧಿ ನಿಗಮವು ಸಮಾಜದ ಕಟ್ಟ ಕಡೆಯ ಮಹಿಳೆ ಹಾಗೂ ದಮನಿತ ಮಹಿಳೆಯರ ಪರವಾಗಿದೆ. ಸಮಾಜದ ದುರ್ಬಲ ಹಾಗೂ ಶೋಷಿತ ಮತ್ತು ಅಸಹಾಯಕ ಮಹಿಳೆಯರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ನಿಗಮವು ಕಾರ್ಯಪ್ರವೃತ್ತವಾಗಿದೆ ಎಂದರು.ಚಿತ್ರದುರ್ಗ ಭರಮಸಾಗರ ಸಮೀಪದ ಕೊಳಹಾಳ್‍ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸ್ಥಾಪಿಸಲು ಉದ್ದೇಶಿಸಿದ ಕೋಳಿ ಮತ್ತು ಕುರಿ-ಮೇಕೆ ಸಾಕಾಣಿಕೆ ಘಟಕವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ನಿಗಮದ ನಿರ್ದೇಶಕ ಮಂಡಳಿಯಲ್ಲಿ ಅನುಮೋದನೆಯ ನಂತರ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ ರೂ.21.23 ಲಕ್ಷಗಳನ್ನು (ಶೇ.50ರಷ್ಟು ಸಾಲ ಮತ್ತು ಶೇ.50 ರಷ್ಟು ಸಹಾಯಧನ) ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.