ಹೊಸ ಪಡಿತರ ಚೀಟಿಗಳ ವಿತರಣೆಗೆ ಒತ್ತಾಯ; ರೈತಸಂಘದಿಂದ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೫: ಹೊಸ ಪಡಿತರ ಚೀಟಿಗಳನ್ನು ನೀಡುವ ಜತೆಗೆ ತಿದ್ದುಪಡಿ ಮತ್ತು ಸೇರ್ಪಡೆ ಮಾಡಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವಾಸುದೇವ ಮೇಟಿ ಬಣದ ದಾವಣಗೆರೆ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತರು ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಗುಮ್ಮನೂರು ಬಸವರಾಜ್, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದು 1 ವರ್ಷ ಸಂಪೂರ್ಣ ಮುಕ್ತಾಯವಾಗಿದ್ದು, ಇದುವರೆಗೂ ಹೊಸ ಐಡಿತರ ಚೀಟಿಯನ್ನು ಹಾಗೂ ತಿದ್ದುಪಡಿ ಮತ್ತು ಸೇರ್ಪಡೆಯನ್ನು ಮಾಡಿರುವುದಿಲ್ಲ. ಇದರಿಂದ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳಿಗೂ ಬಹಳ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿದ್ದರೂ ಸಹ ಪಡಿತರ ಚೀಟಿಯ ಬಗ್ಗೆ ಯಾವುದೇ ಕಾರಣಕ್ಕೂ ಕ್ರಮ ವಹಿಸಿಲ್ಲ. ಕೂಡಲೇ ರಾಜ್ಯ ಸರ್ಕಾರ ಹೊಸ ಪಡಿತರ ಚೀಟಿಯನ್ನು ಕೊಡಬೇಕು ಹಾಗೂ ಹಳೆಯ ಪಡಿತರ ಚೀಟಿಗಳ ತಿದ್ದುಪಡಿ ಮತ್ತು ಸೇರ್ಪಡೆಯ ಕಾರ್ಯಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.ಪಡಿತರ ಚೀಟಿಯಲ್ಲಿ ಒಂದೆರಡು ಬಾರಿ ಸೇರ್ಪಡೆ ಬಿಟ್ಟಿದ್ದರೂ ಕೂಡ ಯಾವೊಬ್ಬ ವ್ಯಕ್ತಿಯು ಅನ್ವಯಿಸಿಲ್ಲ. ಆಶ್ರಯ ಯೋಜನೆಯಡಿಯಲ್ಲಿ ಒಂದು ಕುಟುಂಬಕ್ಕೆ ಪಡಿತರ ಚೀಟಿಯನ್ನು ಸರ್ಕಾರ ನಿಗಧಿ ಮಾಡಿದೆ. ಆದರೆ ರಾಜ್ಯ ಸರ್ಕಾರ ಪಡಿತರ ಚೀಟಿಯನ್ನು ಗ್ರಾಮ ಒನ್ ನಲ್ಲಿ ತಿದ್ದುಪಡಿಗೆ ಅವಕಾಶ ಕೊಟ್ಟಿದ್ದರೂ ಯಾವೊಬ್ಬ ವ್ಯಕ್ತಿಯು ಸೇರ್ಪಡೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಆಹಾರ ನಾಗರೀಕ ಸರಬರಾಜು ಇಲಾಖೆಯ ತಾಲ್ಲೂಕು ಕಛೇರಿಯಲ್ಲಿ ಸುಮಾರು 600-800 ಅರ್ಜಿ ಬಂದಿದ್ದರೂ ಕೂಡ ತಾಲ್ಲೂಕು ಆಡಳಿತ ನಿರ್ವಹಣೆ ಮಾಡಿರುವುದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಕಳುಹಿದಬೇಕು. ಕೂಡಲೇ ರೈತರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಹೊಸ ಪಡಿತರ ಚೀಟಿಯನ್ನು ಕೊಡಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಧಾನ ಸೌಧವನ್ನು ಮುತ್ತಿಗೆ ಹಾಕುತ್ತೇವೆಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಚಿಕ್ಕಬೂದಿಹಾಳ ಭಗತ್ ಸಿಂಹ, ಕೆಂಚಮ್ಮನಹಳ್ಳಿ ಹನುಮಂತಪ್ಪ, ಹೊಟ್ಟೆಗಾನಳ್ ಸುನೀಲ್, ಸೋಮ್ಲಾಪುರ ರಂಜಿತ, ಭರಮಸಮುದ್ರ ಕುಮಾರ್, ಕೋಲ್ಕುಂಟೆ ಉಚ್ಚಂಗಪ್ಪ, ಕಿತ್ತೂರು ಹನುಮಂತಪ್ಪ, ಚಿಕ್ಕತೋಗಲೇರಿ ಮಲ್ಲಿಕಾರ್ಜುನ, ಶಿವರಾಜ್, ಮೆದಿಗೇರಪ್ಪ, ಷಣ್ಮುಖಪ್ಪ, ಭೀಮಣ್ಣ, ತಿಪ್ಪೇಶ್ ಇತರರು ಇದ್ದರು.