ಅವರಾದ (ಬಿ) ಗ್ರಾಮದಲ್ಲಿ ಬೀದಿ ನಾಯಿಗಳ ನಿರ್ವಹಣಾ ಕೇಂದ್ರ ಪ್ರಾರಂಭಿಸಲು ನಿರ್ಧಾರ
ಕಲಬುರಗಿ,ಜೂ.25-ಬೀದಿ ನಾಯಿಗಳ ಹಾವಳಿ ತಡೆಗೆ ಕಲ್ಯಾಣ ಕರ್ನಾಟಕ ಪ್ರಾಣಿ ದಯಾ ಹಾಗೂ ಗೋ ಸೇವಾ ಸಂಸ್ಥೆ, ಕಲ್ಯಾಣ ಕರ್ನಾಟಕ ಗೋ ಶಾಲಾ ವತಿಯಿಂದ ಅವರಾದ (ಬಿ) ಗ್ರಾಮದಲ್ಲಿ ಬೀದಿ ನಾಯಿಗಳ ನಿರ್ವಹಣಾ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಸಾಧಿಕ್ ಅಲಿ ದೇಶಮುಖ ಮತ್ತು ಕಾರ್ಯದರ್ಶಿ ಮಂಜುನಾಥ ನಾಲವಾರಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರಾದ (ಬಿ) ಗ್ರಾಮದ ಒಂದುವರೆ ಎಕರೆ ಜಾಗದಲ್ಲಿ ಬೀದಿ ನಾಯಿಗಳ ನಿರ್ವಹಣಾ ಕೇಂದ್ರ ತೆರೆದು ಅವುಗಳಿಗೆ ಊಟ, ಉಪಚಾರ ಮತ್ತು ಪ್ರತ್ಯೇಕ ಆಸ್ಪತ್ರೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಗಮನಕ್ಕೆ ತರಲಾಗಿದ್ದು, ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಕಲಬುರಗಿ ನಗರ ಮತ್ತು ಜಿಲ್ಲೆಯಲ್ಲಿ 2022ರಲ್ಲಿ 2105 ಮತ್ತು 2023ರಲ್ಲಿ 1447 ಬೀದಿ ನಾಯಿ ಕಚ್ಚಿದ ಪ್ರಕರಣಗಳು ನಡೆದಿವೆ. ಚಿಕ್ಕ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪ್ರಕರಣಗಳು ನಡೆಯುತ್ತಲೇ ಇವೆ. ಇದನ್ನು ತಡೆಗಟ್ಟುವ ಸಲುವಾಗಿ ಬೀದಿ ನಾಯಿಗಳ ನಿರ್ವಹಣಾ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಜಿಲ್ಲಾ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
2021ರ ಸೆಪ್ಟೆಂಬರ್ 17 ರಂದು ಅವರಾದ (ಬಿ) ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಗೋ ಶಾಲೆ ಆರಂಭಿಸಲಾಗಿದ್ದು, ಅಲ್ಲಿ ಸದ್ಯ 40 ಹಸುಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಅವರು ಇದೇ ವೇಳೆ ತಿಳಿಸಿದರು.