ಮಳೆ ಹಾನಿ ತಡೆಗೆ ಕ್ರಮ: ಬಸವರಾಜು
ಕೆ.ಆರ್.ಪುರ, ಜೂ.೨೫-ನಗರದಲ್ಲೆ ಕಳೆದ ಬಾರಿಯಾದಂತಹ ಮಳೆಹಾನಿಯಾಗದಂತೆ ಎಚ್ಚರವಹಿಸಲಾಗಿದ್ದು,ರಾಜಕಾಲುವೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.
ಕೆ.ಆರ್.ಪುರ ಕ್ಷೇತ್ರದ ಕೊತ್ತನೂರಿನ ಬಳಿ ರಾಜಕಾಲುವೆ ಪರಿಶೀಲನೆ ಹಾಗೂ ಗೆದ್ದಲಹಳ್ಳಿಯಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರಿಗೆ ಮಳೆಹಾನಿಯಿಂದ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಬೃಹತ್ ರಾಜಕಾಲುವೆಗಳ ಅಭಿವೃದ್ಧಿ ಮಾಡಲಾಗುತ್ತಿದ್ದು, ಹಂತಹಂತವಾಗಿ ಕಾಲುವೆಗಳ ನಿರ್ಮಾಣ ಮಾಡಲಾಗುವುದೆಂದು ಹೇಳಿದರು.
ರಾಜಕಾಲುವೆಗಳ ಅಭಿವೃದ್ಧಿ ಬಹಳ ಮುಖ್ಯವಾಗಿದ್ದು,ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಗಮನಹರಿಸಲಾಗಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವಂತೆ ತಿಳಿಸಿದ್ದೇನೆ ಎಂದು ನುಡಿದರು.
ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ತಾರತಮ್ಯ ಮಾಡದೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ, ಮಾಜಿ ಅಧ್ಯಕ್ಷ ಚಿದಾನಂದಮೂರ್ತಿ,ಮುಖಂಡರಾದ ಲೋಕೆಶ್ ಗೌಡ,ಗಣೇಶ್ ರೆಡ್ಡಿ, ಮುನಿರಾಜು, ಎಇಇ ವಿನಯ್,ಎಇ ರಮೇಶ್ ಇದ್ದರು.