ಲಿಂಕ್ ಕೆನಾಲ್ ಯೋಜನೆ ವಿರೋಧ: ತುಮಕೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ
ತುಮಕೂರು, ಜೂ. ೨೫- ಕಲ್ಪತರುನಾಡಿನ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ರಾಮನಗರಕ್ಕೆ ಕೊಂಡೊಯ್ಯುವ ಸಲುವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ವಿರೋಧಿಸಿ ಹಾಗೂ ಕೈ ಬಿಡುವಂತೆ ಆಗ್ರಹಿಸಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಇಂದು ಕರೆ ನೀಡಿದ್ದ ತುಮಕೂರು ಜಿಲ್ಲಾ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೇಮಾವತಿ ನೀರನ್ನು ಪೈಪ್‌ಲೈನ್ ಮೂಲಕ ರಾಮನಗರ-ಮಾಗಡಿಗೆ ಕೊಂಡೊಯ್ದರೆ ತುಮಕೂರು ಜಿಲ್ಲೆಯ ಜನರಿಗೆ ಮರಣಶಾಸನವಾಗಲಿದೆ ಎಂಬುದನ್ನು ಅರಿತಿರುವ ಜಿಲ್ಲೆಯ ರೈತರು, ಜನಸಾಮಾನ್ಯರು, ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳು ಕರೆ ನೀಡಿರುವ ಇಂದಿನ ತುಮಕೂರು ಜಿಲ್ಲಾ ಬಂದ್‌ಗೆ ವರ್ತಕರು, ಚಿನ್ನಬೆಳ್ಳಿ ಮಾಲೀಕರ ಅಸೋಸಿಯೇಷನ್, ಗಾರ್ಮೆಂಟ್ಸ್ ಮಾಲೀಕರು, ಹೋಟೆಲ್ ಮಾಲೀಕರು, ಮಠಾಧೀಶರು, ವಕೀರಲ ಸಂಘ, ಪಾನ್ ಬ್ರೋಕರ್ಸ್ ಸಂಘ, ರೈಸ್‌ಮಿಲ್ ಮಾಲೀಕರು, ಅನುದಾನ ರಹಿತ ಖಾಸಗಿ ಶಾಲಾ-ಕಾಲೇಜುಗಳು, ಫುಟ್‌ಪಾತ್ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಗಳು ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇಂದಿನ ಬಂದ್‌ಗೆ ಉತ್ತಮ ಸ್ಪಂದನೆ ದೊರೆತಿದೆ.
ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಸಿರಾ ಸೇರಿದಂತೆ ಜಿಲ್ಲೆಯ ೧೦ ತಾಲ್ಲೂಕುಗಳಲ್ಲೂ ಸಹ ಬಂದ್ ಬಹುತೇಕ ಯಶಸ್ವಿಯಾಗಿದರೆ, ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದು ವ್ಯಾಪಾರ ವಹಿವಾಟು ನಡೆಸಿದ ದೃಶ್ಯಗಳು ಕಂಡು ಬಂದವು. .
ಈ ಬಂದ್ ರಾಜ್ಯ ಸರ್ಕಾರದ ವಿರುದ್ಧ ನಡೆದಿರುವುದರಿಂದ ಕೆಎಸ್ಸಾರ್ಟಿಸಿ ಬಸ್‌ಗಳು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಹಾಗೆಯೇ ಖಾಸಗಿ ಬಸ್‌ಗಳು, ಆಟೋರಿಕ್ಷಾಗಳು, ಕಾರುಗಳು, ಗೂಡ್ಸ್ ವಾಹನಗಳು, ಲಾರಿಗಳ ಸಂಚಾರ ಎಂದಿನಂತಿತ್ತು.
ಜಿಲ್ಲೆಯಾದ್ಯಂತ ಬಂದ್ ಬೆಂಬಲಿಸಿ ಬಹುತೇಕ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸದ ಕಾರಣ ಎಂದಿನಂತೆ ತರಗತಿಗಳು ನಡೆದವಾದರೂ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು.
ನಗರದ ಎಂ.ಜಿ. ರಸ್ತೆ, ಬಿ.ಹೆಚ್. ರಸ್ತೆ, ಎಸ್.ಎಸ್.ಪುರಂ, ಎಸ್‌ಐಟಿ ಮುಖ್ಯರಸ್ತೆ, ಗುಬ್ಬಿ ಗೇಟ್ ರಸ್ತೆ, ಮಂಡಿಪೇಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವರ್ತಕರು ಸ್ವಯಂ ಪ್ರೇರಿತರಾಗಿ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಹಾಗೆಯೇ ಚಲನಚಿತ್ರ ಮಂದಿರಗಳು, ಹೋಟೆಲ್‌ಗಳು ಸಹ ಬಾಗಿಲು ಮುಚ್ಚಿದ್ದವು. ಉಳಿದಂತೆ ತುರ್ತು ಸೇವೆಗಳಾದ ಖಾಸಗಿ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಸಹಕಾರಿ ಸಂಘಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಿದವು.
ಸರ್ಕಾರದ ವಿರುದ್ಧ ಆಕ್ರೋಶ
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕೈಗೊಂಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಮಾಜಿ ಸಚಿವ ಸೊಗಡು ಶಿವಣ್ಣ, ಕನ್ನಡ ಪರ ಸಂಘಟನೆಯ ಧನಿಯಕುಮಾರ್, ರೈತ ಸಂಘದ ಗೋವಿಂದರಾಜು ಸೇರಿದಂತೆ ಇನ್ನಿತರೆ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಟೌನ್‌ಹಾಲ್ ವೃತ್ತದಲ್ಲಿ ರಸ್ತೆತಡೆ ಚಳವಳಿ ನಡೆಸಿ ರಕ್ತ ಕೊಟ್ಟೇವು, ನೀರು ಬಿಡೆವು ಎಂಬ ಘೋಷಣೆಗಳನ್ನು ಕೂಗಲಾಯಿತು.
ಜಿಲ್ಲೆಯ ಜನರ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ರಾಮನಗರ-ಮಾಗಡಿಗೆ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಮೂಲಕ ಕೊಂಡೊಯ್ಯಲು ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ಹೊರ ಹಾಕಿದರು.
ಈ ಯೋಜನೆ ಜಾರಿಯಾದರೆ ಸಿ.ಎಸ್.ಪುರ, ಸಂಪಿಗೆ, ಗುಬ್ಬಿ, ಬೇಳೂರು, ಬೆಳ್ಳಾವಿ ಹೋಬಳಿಗಳು ಸೇರಿದಂತೆ ತುರುವೇಕೆರೆ, ತುಮಕೂರು ಗ್ರಾಮಾಂತರ, ಬುಗುಡನಹಳ್ಳಿ, ಕೊರಟಗೆರೆ, ಮಧುಗಿರಿ ಹಾಗೂ ಸಿರಾ ತಾಲ್ಲೂಕುಗಳಿಗೆ ಒಂದು ಬೊಗಸೆಯಷ್ಟು ನೀರು ಬರುವುದಿಲ್ಲ. ಆದ್ದರಿಂದ ಈ ಯೋಜನೆಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಟೌನ್‌ಹಾಲ್ ವೃತ್ತದಿಂದ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಅಧಿಕಾರಿಗಳಿಗೆ ಈ ಯೋಜನೆ ಕೈ ಬಿಡುವಂತೆ ಮನವಿ ಪತ್ರವನ್ನು ಸಲ್ಲಿಸಿದರು.
ತುಮಕೂರು ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ತುಮಕೂರು ನಗರ, ಗುಬ್ಬಿ, ತುರುವೇಕೆರೆ, ತಿಪಟೂರು ಸೇರಿದಂತೆ ಜಿಲ್ಲೆಯಾದ್ಯಂತ ಎಸ್ಪಿ ಅಶೋಕ್ ಕೆ.ವಿ. ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.