ನಿಡಗುರ್ತಿ ಗ್ರಾಮದಲ್ಲಿ  ಎತ್ತುಗಳ ಓಟದ ಸ್ಪರ್ಧೆ ಸಂಭ್ರಮ
ಸಂಜೆವಾಣಿ ವಾರ್ತೆ
ಸಂಡೂರು:ಜೂ: 25: ಕಾರ ಹುಣ್ಣಿಮೆಯ ಅಂಗವಾಗಿ ಸಂಜೆ ಎತ್ತುಗಳ ಕರೆ ಹರಿಯುವ ಪದ್ದತಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಕಂಡು ಬಂದಿತು. ಹುಣ್ಣಿಮೆಯ ಅಂಗವಾಗಿ ಎತ್ತುಗಳ ಕೋಡುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಬಸವಣ್ಣ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಗ್ರಾಮದ ಬುಡ್ಡೆಕಲ್ಲು ಭಾಗದಿಂದ ದೇವಸ್ಥಾನಗಳ ವರೆಗೆ ಎತ್ತುಗಳನ್ನು ಓಟದ ಮೂಲಕ ಕರೆ ಹರಿಸುವ ಪದ್ದತಿ ತಾಲೂಕಿನ ನಿಡಗುರ್ತಿ ಗ್ರಾಮದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಗ್ರಾಮದ ರೈತ ಹನುಮಂತಪ್ಪನವರ ಎತ್ತು ಓಟದ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆಯಿತು.
ಕಾರಹುಣ್ಣುಮೆ ಎಂದರೆ ಕಲೆತಾಗ( ಅನುಕೂಲವಾದಾಗ) ಹುಣ್ಣಿಮೆಯನ್ನು ಆಚರಿಸುವುದು ಬಹುತೇಕ ನಡೆದುಕೊಂಡು ಬಂದ ಸಂಪ್ರದಾಯ, ಅದರಲ್ಲೂ ಪ್ರಮುಖವಾಗ ಸೋಮುವಾರದಂದು ಅದ್ದೂರಿಯಾಗಿ ಹುಣ್ಣಿಮೆಯನ್ನು ನಿಡಗುರ್ತಿ ಗ್ರಾಮದಲ್ಲಿ ಆಚರಿಸಿದರು, ಪ್ರಮುಖವಾಗಿ ಪ್ರತಿ ರೈತರ ಮನೆಯಲ್ಲಿಯೂ ಸಹ ಹೋಳಿಗೆ ನೈವೇದ್ಯವನ್ನು ಸಿದ್ದಪಡಿಸಿರುತ್ತಾರೆ, ಎಲ್ಲರೂ ಸಹ ದೇವಸ್ಥಾನಕ್ಕೆ ತೆರಳಿ ಮಾನವಿ ಹಣ್ಣಿನ ಸಿಕರಣೆ ಮತ್ತು ಹೋಳಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ, ಇದೇ ಸಂದರ್ಭದಲ್ಲಿ ಎತ್ತುಗಳನ್ನು ಈ ದಿನ ಯಾವುದೇ ಕೃಷಿ ಚಟುವಟಿಕೆಗಳಿಗೆ ಬಳಸದೆ ಅವುಗಳನ್ನು ಮೈ ತೊಳೆದು ಸಿಂಗಾರ ಮಾಡಿ ಕೋಡುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿ ಅವುಗಳಿಗೂ ಸಹ ವಿಶೇಷವಾದ ಪೂಜೆಯನ್ನು ಸಲ್ಲಿಸುತ್ತಾರೆ.
ಸಂಜೆಯಾಗುತ್ತಿದ್ದಂತೆ ಗ್ರಾಮದ ಮುಖಂಡರ ನೇತೃತ್ವದಲ್ಲಿ ಕರೆ ಹರಿಯುವ ಕಾರ್ಯಕ್ರಮ ಪ್ರಾರಂಭವಾಯಿತು, ಯಾವ ರೈತರು ಅಸಕ್ತಿಯನ್ನು ವಹಿಸುತ್ತಾರೆ ಅವರು ತಮ್ಮ ಎತ್ತುಗಳನ್ನು ಸ್ಪರ್ಧೆಗೆ ಇಳಿಸುತ್ತಾರೆ, ಈ ಸಂದರ್ಭದಲ್ಲಿ ಬಹುತೇಕ ಬಿಳಿ ಎತ್ತು ಪ್ರಥಮ ಸ್ಥಾನಬಂದರೆ ಸಮೃದ್ದಿ, ಕೆಂದು ಬಣ್ಣದ ಎತ್ತು ಬಂದರೆ ಮೆಕ್ಕೆ ಜೋಳದ ಬೆಳೆ ಸಮೃದ್ದಿಯ, ಎನ್ನುವ ವಾಡಿಕೆ ಇದೆ, ಅದೇ ರೀತಿಯಲ್ಲಿ ಪ್ರಥಮ ಸ್ಥಾನದಲ್ಲಿ ಬಂದ ಎತ್ತಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ ಅ ರೈತನಿಗೆ ಬಹುಮಾನವನ್ನು ಸಹ ನೀಡುವ ಮೂಲಕ ಅಭಿನಂದಿಸುತ್ತಾರೆ, ಅಲ್ಲದೆ ಗ್ರಾಮದ ತುಂಬೆಲ್ಲಾ ಮೆರವಣಿಗೆಯನ್ನು ಸಲ್ಲಿಸುವ ಮೂಲಕ ಎತ್ತಿಗೂ ಸಹ ಗೌರವವನ್ನು ಸಲ್ಲಿಸಿದರು.