ದೇಶಪ್ರೇಮ ಇದ್ದಾಗ ಮಾತ್ರ ಇಂಥ ಪರೀಕ್ಷೆ ಎದುರಿಸಲು ಸಾಧ್ಯ: ಬಸವರಾಜ ಕೌಲಗಿ
ವಿಜಯಪುರ,ಸೆ.26:ಎನ್‍ಡಿಎ ಪರೀಕ್ಷೆಯಲ್ಲಿ ಎಕ್ಸಲಂಟ್ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದು, ಇದು ಶಾಲೆ ಹಾಗೂ ಜಿಲ್ಲೆಗೆ ಹೆಮ್ಮೆ ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಅವರು ತಿಳಿಸಿದ್ದಾರೆ.
ದೇಶದ ರಕ್ಷಣಾ ವ್ಯವಸ್ಥೆಗೆ ಅವಶ್ಯಕವಾಗಿರುವ ಕೆಲವು ಸೇವೆಗಳಿಗೆ ಬೇಕಾದಂತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರುವ ಕೇಂದ್ರ ಲೋಕ ಸೇವಾ ಆಯೋಗವು ಪ್ರತಿ ವರ್ಷ ಎನ್‍ಡಿಎ ಪರೀಕ್ಷೆಗಳನ್ನು ನಡೆಸುತ್ತದೆ. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶವಿದೆ. 2024ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ವಿಜಯಪುರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸಮರ್ಥ ಕಲಾಲ್, ಶ್ರೀಧತ್ತ ದಿಕ್ಷೀತ, ಪ್ರಮೋದ ಚಾಂದಕವಟೆ, ಆದರ್ಶ ವಜ್ರವಾಡ, ಪ್ರೀತಿ ಮಂಟೂರು ಸೇರಿದಂತೆ ಐವರು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಕಲಿಯುತ್ತಿರುª ಕಾಲೇಜಿಗೂ ಹಾಗೂ ವಿಜಯಪುರಜಿಲ್ಲೆಗೂ ಕೀರ್ತಿ ತಂದಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕಠಿಣವಾಗಿರುವ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ತಮ್ಮಲ್ಲಿನ ದೇಶಭಕ್ತಿಯನ್ನು ಪರೀಕ್ಷೆ ಎದುರಿಸುವ ಮೂಲಕ ತೋರ್ಪಡಿಸಿದ್ದಾರೆ. ಏಕೆಂದರೆ ಎನ್‍ಡಿಎ ಪರೀಕ್ಷೆಗಳು ಎಲ್ಲ ಪರೀಕ್ಷೆಗಳಂತೆ ಇರುವುದಿಲ್ಲ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸಹ ಎಲ್ಲರಂತೆ ಇರುವುದಿಲ್ಲ. ಯಾರಿಗೆ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ನನ್ನದೂ ಒಂದು ಪಾಲಿರಲಿ ಹಾಗೂ ಉಸಿರು ಹೆಸರು ಕೊಟ್ಟ ದೇಶಕ್ಕಾಗಿ ನಮ್ಮ ಸೇವೆ ಮುಡಿಪಿರಲಿ ಎನ್ನುವ ಆಸೆ ಇರುತ್ತದೆಯೋ ಅಂಥವರು ಮಾತ್ರ ಈ ಪರೀಕ್ಷೆಯನ್ನು ಎದುರಿಸುವುದಕ್ಕೆ ಮುಂದಾಗುತ್ತಾರೆ. ಹೀಗಾಗಿ ಇಂಥ ಮಕ್ಕಳ ಮೇಲೆ ಅಪಾರ ಗೌರವ ಮೂಡುತ್ತದೆ ಎಂದರು.
ನಮ್ಮ ವಿದ್ಯಾಲಯದ ಮಕ್ಕಳು ಎನ್‍ಡಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಭಾರತ ಮಾತೆಯ ಸೇವೆಯನ್ನು ಮಾಡುವುದಕ್ಕೆ ಅಣಿಯಾಗುತ್ತಿರುವುದು ನಮಗೆಲ್ಲ ಅಭಿಮಾನದ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಇವರ ಮಾರ್ಗದರ್ಶನ ಪಡೆದುಕೊಂಡ ಕಿರಿಯ ಸಹಪಾಟಿಗಳು ಸಹ ಎನ್‍ಡಿಎ ಪರೀಕ್ಷೆಯನ್ನು ಬರೆದು ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಸರ್ವ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳು ಶುಭ ಹಾರೈಸಿದರು.