ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಬೃಹತ್ ಪ್ರತಿಭಟನೆ
ವಿಜಯಪುರ,ಸೆ.26:ಮುಡಾ ಹಗರಣದಲ್ಲಿ ರಾಜ್ಯ ಹೈಕೋರ್ಟ್ ತೀರ್ಪನ್ನು ಗೌರವಿಸಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಮುಡಾನಲ್ಲಿ ಅಕ್ರಮವಾಗಿ 14 ಸೈಟ ಪಡೆದಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆಗೆ ಉತ್ತರ ಕೊಡದೆ ಪಲಾಯನ ಮಾಡಿದರು. ರಾಮಕೃಷ್ಣ ಹೆಗಡೆ, ದೇವೇಗೌಡ, ಪಟೇಲ್ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಸ್ಕಾರದಲ್ಲಿ ಬೆಳೆದ ಸಿದ್ಧರಾಮಯ್ಯ ಅವರಿಗೆ ಇಂತಹ ಘಟನೆ ಶೋಭೆ ತರುವದಿಲ್ಲ. ನೈತಿಕ ಹೊಣೆ ಹೊತ್ತು ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಪದವಿ ನಿಮ್ಮ ಅಥವಾ ಕಾಂಗ್ರೆಸ್‍ನ ಆಸ್ತಿ ಅಲ್ಲ. ಅದು ರಾಜ್ಯದ 7 ಕೋಟಿ ಕನ್ನಡಿಗರ ಜನರ ಸೇವೆಗೆ ಇರುವ ಅವಕಾಶ. ಪ್ರತಿ ಸಲ ನಮಗೆ 136 ಸ್ಥಾನ ಬಂದಿವೆ ಎನ್ನುವ ಕಾಂಗ್ರೆಸ್ಸಿಗರು ಬಹುಮತ ಬಂದರೆ ಏನೇ ತಪ್ಪಾದರೂ ಕ್ಷಮಿಸಬೇಕಾ? ರಾಜ್ಯಪಾಲರ ವಿರುದ್ಧ ಮಾತನಾಡಿ ದಬ್ಬಾಳಿಕೆ ಮಾಡಿದ್ದೀರಿ. ಆದರೆ ಹೈಕೋರ್ಟ್ ರಾಜ್ಯಪಾಲರ ನಿರ್ಣಯವನ್ನು ಎತ್ತಿ ಹಿಡಿದಿದೆ. 30 ಗಂಟೆಗಳ ಕಾಲ ವಾದ-ವಿದಾದ ನಡೆದು ಪಡೆದ ಸೈಟಗಳು ಅಕ್ರಮ ಎಂದು ತನಿಖೆಗೆ ಕೋರ್ಟ್ ಆದೇಶಿಸಿದೆ. ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಹೋಗುತ್ತಿದ್ದರು. ಇದೇ ಏನು ನೀವು ಸಂವಿಧಾನಕ್ಕೆ ಕಾನೂನಿಗೆ ಬೆಲೆ ಕೊಡುವ ರೀತಿ ಎಂದು ಪ್ರಶ್ನಿಸಿದರು.
ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾಗಿ ಹೈಕೋರ್ಟ್ ತನಿಖೆ ಆದೇಶಿಸಿದರೂ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶನ ಮಾಡುತ್ತಿರುವರಿ ಎಂದು ಟೀಕಿಸಿದರು.
40 ವರ್ಷಗಳ ನಿಮ್ಮ ಸುದೀರ್ಘ ರಾಜಕಿಯದಲ್ಲಿ ಹೆಗಡೆ ಪಟೇಲ್ ಅವರಂತಹ ಗರಡಿಯಲ್ಲಿ ಪಳಗಿ ರಾಜೀನಾಮೆ ನೀಡದಿರುವದು ಸಂವಿಧಾನ ವಿರೋಧಿ ಧೋರಣೆಯಾಗಿದೆ. ಆದ್ದರಿಂದ ತಕ್ಷಣವೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿಗಳಾದ ಮುಳುಗುಡ ಪಾಟೀಲ, ಈರಣ್ಣ ರಾವೂರ್, ಸಾಬು ಮಾಶಾಳ, ಸಂಜಯ ಐಹೊಳೆ, ಉಮೇಶ ಕೊಳಕೂರ, ಗೋಪಾಲ ಘಟಕಾಂಬಳೆ, ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ಕರಡಿ, ಜವಹಾರ ಗೋಸಾವಿ, ರವಿಕಾಂತ ಬಗಲಿ, ಗುರುಲಿಂಗಪ್ಪ ಅಂಗಡಿ, ಮಹೇಂದ್ರ ನಾಯಕ, ಸುರೇಶ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ, ಭೀಮಾಶಂಕರ ಹದನೂರು, ಶೀಲವಂತ ಉಮರಾಣಿ, ಬಸವರಾಜ ಹೂಗಾರ, ಚಿದಾನಂದ ಚಲವಾದಿ, ಸಪ್ನಾ ಕಣ್ಮುಚನಾಳ, ಮಲ್ಲಮ್ಮ ಜೋಗೂರು, ಲಕ್ಷ್ಮಿ ಕನ್ನೊಳ್ಳಿ, ಗೀತಾ ಕುಕನೂರು, ಕಾಂತು ಸಿಂಧೆ, ವಿಜಯ ಜೋಶಿ, ಬಸು ಬೈಚುವಾಳ, ರಾಜಕುಮಾರ ಸಗಾಯಿ, ಜಗದೀಶ ಮುಚ್ಚಂಡಿ, ಪ್ರವೀಣ ಕೂಡಗಿ, ಹರ್ಷಗೌಡ ಪಾಟೀಲ, ಪಾಪುಸಿಂಗ್ ರಜಪೂತ, ಭರತ ಕೋಳಿ, ಸಂಗು ಉಕ್ಕಲಿ, ಆನಂದ ಮುಚ್ಚಂಡಿ, ಕಲ್ಮೇಶ ಹಿರೇಮಠ, ವಿಠ್ಠಲ ನಡುವಿನಕೇರಿ, ಬಾಬು ಶಿರಶ್ಯಾಡ, ಪವನ ಕುಲಕರ್ಣಿ, ಅನೀಲ ಉಪ್ಪಾರ, ಶರಣಬಸು ಕುಂಬಾರ, ರಾಮಚಂದ್ರ ಚವ್ಹಾಣ, ಪ್ರವೀಣ ನಾಟೀಕಾರ, ವಿನಾಯಕ ದಹಿಂದೆ ಸೇರಿದಂತೆ ಎಲ್ಲಾ ಮಂಡಲದ ಅಧ್ಯಕ್ಷರು ಮಹಾನಗರ ಪಾಲಿಕೆ ಸದಸ್ಯರು, ಮಹಿಳಾ ಮೋರ್ಚಾ ಪದಾಧಿಕಾರಿಗಳು, ಯುವ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.