ಕಲುಷಿತ ನೀರು ಸೇವನೆ ವ್ಯಕ್ತಿ ಸಾವು-೫ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ಕೋಲಾರ,ಜೂ,೨೫-ಪಂಚಾಯಿತಿ ವತಿಯಿಂದ ಸರಬರಾಜು ಮಾಡುವ ನೀರು ಕಲುಷಿತಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಗ್ರಾಮದಲ್ಲಿ ಆತಂಕದ ವಾತವರಣ ನಿರ್ಮಾಣವಾಗಿರುವ ಘಟನೆ ಮುಳಬಾಗಿಲಿನಲ್ಲಿ ನಡೆದಿದೆ.
ಮುಳಬಾಗಿಲು ತಾಲೂಕಿನ ಮಿಣಜೇನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದ ವೆಂಕಟರಮಣಪ್ಪ (೬೦) ಮನೆಯಲ್ಲಿ ಸಾವನ್ನಪ್ಪಿದ್ದು ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಈ ಘಟನೆಯಿಂದ ಗ್ರಾಮದ ಐದಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು ಅಸ್ವಸ್ಥರನ್ನು ಕೋಲಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪಂಚಾಯಿಯಿಂದ ಮನೆ ಮನೆಗೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಚರಂಡಿ ಒಳಗಡೆ ಅಳವಡಿಸಲಾಗಿದ್ದು ಇದರಿಂದ ನೀರು ಕಲುಷಿತಗೊಂಡು ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಇದೇ ನೀರನ್ನು ಸೇವಿಸಿರುವ ಗ್ರಾಮದ ೫ ಮಂದಿ ಅಸ್ವಸ್ಥಗೊಂಡಿದ್ದಾರೆ.
ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಮಿಣಜೇನಹಳ್ಳಿಯಲ್ಲಿ ಮನೆಮನೆ ನೀರು ಸರಬರಾಜು ಮಾಡುವ ಪೈಪ್ ಲೈನ್ ಅನ್ನು ಸರಿಪಡಿಸುವಂತೆ ಗ್ರಾಮಸ್ಥರು ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ಎಡವಟ್ಟಿನಿಂದ ಈ ದುರ್ಘಟನೆ ಕಾರಣವಾಗಿದೆ ಎನ್ನಲಾಗಿದೆ.
ಇನ್ನು ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿರುವ ರಾಜಮ್ಮ, ವೆಂಕಟರಾಮಪ್ಪಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಜಯಮ್ಮ, ರತ್ಮಮ್ಮ ಜಿಲ್ಲಾಸ್ಪ್ರತೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ, ಇನ್ನು ಘಟನೆ ಕುರಿತು ಗ್ರಾಮಕ್ಕೆ ಗ್ರಾಮಕ್ಕೆ ಡಿಹೆಚ್‌ಓ ಡಾ.ಜಗದೀಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಸೇರ್ಪಡೆಯಾಗಿರುವ ಶಂಕೆಯೂ ಸಹ ವ್ಯಕ್ತವಾಗಿದ್ದು ಗ್ರಾಮದಲ್ಲಿ ಆತಂಕದ ಛಾಯೆ ಆವರಿಸಿದೆ.
ಸೋಮವಾರ ಬೆಳಗ್ಗೆ ನೀರು ಸೇವಿಸಿದ ಬಳಿಕ ವೆಂಕಟವರಣಪ್ಪ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂದ ಮುಳಬಾಗಿಲು ಗ್ರಾಮಾಂತರ ಪೋಲೀಸರು ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ರಾಮದಲ್ಲಿ ನೀರಿನ ಸಮಸ್ಯೆ ಕುರಿತು ಈ ಬಗ್ಗೆ ಹಲವಾರು ಬಾರಿ ಪಂಚಾಯಿತಿ ಪಿಡಿಓ ಅವರಿಗೆ ತಿಳಿಸಲಾಗಿದ್ದು ಯಾವುದೇ ಕ್ರಮವನ್ನು ಕೈಗೊಂಡಿಲ್ಲ, ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿದ್ದರೂ ಸಪರ್ಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಪಂಚಾಯಿತಿಯಿಂದ ನೀರು ಸರಬರಾಜು ಮಾಡುವ ಪೈಪ್ ಲೈನ್ ಮೂಲಕ ಬರುವ ನೀರನ್ನು ಅಡುಗೆಗೆ ಬಳಸಿಕೊಳ್ಳಲಾಗುತ್ತಿದ್ದು ನೀರು ಕಲುಷಿತಗೊಂಡಿರುವ ಕಾರಣಕ್ಕೆ ಗ್ರಾಮದಲ್ಲಿರುವ ಪ್ರತಿಯೊಂದು ಮನೆಯಲ್ಲಿರುವ ಒಬ್ಬೊಬ್ಬರಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ ಎನ್ನುವುದು ಗ್ರಾಮಸ್ಥರ ಗಂಬೀರ ಆರೋಪವಾಗಿದೆ.