ಖಾಲಿ ಹುದ್ದೆಗಳ ಭರ್ತಿ ಸಿಎಂಗೆ ಮನವಿ
ಕೋಲಾರ,ಜೂ, ೨೫- ಕೋಲಾರ ತಾಲ್ಲೂಕು ತಹಸೀಲ್ದಾರ್ ಕಛೇರಿಯಲ್ಲಿ ವಿವಿಧ ಹುದ್ದೆಗಳ ಮಂಜೂರಾತಿಗಿಂತಲೂ ೩೧ ಹುದ್ದೆಗಳು ಖಾಲಿಯಿದ್ದು ಜನಸಾಮಾನ್ಯರ ಕೆಲಸ ಕಾರ್ಯಗಳಾಗದೆ ತೊಂದರೆಯಾಗುತ್ತಿದ್ದು ತಕ್ಷಣ ಖಾಲಿ ಹುದ್ದೆಗಳ ಬರ್ತಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯರವರಿಗೆ ಸಾಮಾಜಿಕ ಕಾರ್ಯಕರ್ತ ಗೌರಿಪೇಟೆ ಕೆ.ಎನ್.ರವೀಂದ್ರ ರವರು ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.
ಕೋಲಾರ ತಾಲ್ಲೂಕು ಕಚೇರಿಯಲ್ಲಿ ಸರ್ಕಾರದ ಮಂಜೂರಾತಿ ನೀಡಿದ ಹುದ್ದೆಗಳಿಗಿಂತಲೂ ಕಡಿಮೆ ಜನರು ಕಾರ್ಯ ನಿರ್ವಹಿಸುತ್ತಿದ್ದು ಹಾಲಿ ಸುಮಾರು ೩೧ ಸಂಖ್ಯೆಯ ವಿವಿಧ ಶ್ರೇಣಿಯ ಹುದ್ದೆಗಳು ಖಾಲಿ ಇರುತ್ತವೆ. ಖಾಲಿ ಇರುವಂತಹ ಹುದ್ದೆಗಳು ಸಂಖ್ಯೆ ಹಾಗೂ ಪದನಾಮ ಉಪ ತಹಸೀಲ್ದಾರ್ ಖಾಲಿ ಹುದ್ದೆಗಳ ಸಂಖ್ಯೆ -೨, ದ್ವಿತೀಯ ದರ್ಜೆ ಸಹಾಯಕ -೨, ಕಂಪ್ಯೂಟರ್ ಆಪರೇಟರ್ -೧, ಬೆರಳಚ್ಚುಗಾರರು -೧, ಸಿ.ಸಿ.ಟಿ -೨, ಗ್ರಾಮ ಲೆಕ್ಕಿಗರು -೧೨, ಭೂಮಿ ಗ್ರಾಮ ಲೆಕ್ಕಿಗರು -೩, ನಾಡ ಕಚೇರಿ ಗ್ರಾಮ ಲೆಕ್ಕಿಗರು-೧, ದಪೇದರ್ -೧, ಡಿ ದರ್ಜೆ ನೌಕರರು -೫ ಮತ್ತು ವಾಹನ ಚಾಲಕರು -೧ ಖಾಲಿ ಇರುತ್ತದೆ.
ತಾಲ್ಲೂಕು ಕಛೇರಿಯಲ್ಲಿ ಮೇಲೆ ತಿಳಿಸಿದ ಪ್ರಕಾರ ೩೧ ಹುದ್ದೆಗಳು ಇರುವುದರಿಂದ ದೈನಂದಿನ ಕೆಲಸ ಕಾರ್ಯಗಳು ಸರಾಗವಾಗಿ ನಡೆಯದೆ ರೈತರಿಗೆ ಹಾಗೂ ಜನಸಾಮಾನ್ಯರು ತಮ್ಮಗಳ ಕೆಲಸಗಳಾಗದೆ ಪರದಾಡುವಂತಾಗಿದೆ. ಇದು ಸರ್ಕಾರದ ಜನಪರ ಯೋಜನೆಗಳ ಅನುಷನದಲ್ಲೂ ಅಡಚಣೆಯಾಗುತ್ತಿದೆ. ಇದು ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಾಗಲು ಮುಂದಿನ ದಿನಗಳಲ್ಲಿ ಎಡೆಮಾಡಿ ಕೊಡಲಿದೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ಕೋಲಾರ ತಹಸೀಲ್ದಾರ್ ಕಚೇರಿಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಭರ್ತಿಗೆ ತಕ್ಷಣ ಅಗತ್ಯ ಕ್ರಮತೆಗೆದುಕೊಳ್ಳುಬೇಕೆಂದು ಮನವಿಯಲ್ಲಿ ಕೋರಿದ್ದಾರೆ.