ಟೊಮೆಟೋ ಬೆಳೆಯ ನಷ್ಟ ಪರಿಹಾರಕ್ಕೆ ಒತ್ತಾಯ
ಕೋಲಾರ,ಜೂ,೨೫-ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸದ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಿ ಬಿಂಗಿ ರೋಗದಿಂದ ನಷ್ಟವಾಗಿರುವ ಪ್ರತಿ ಎಕರೆ ಟೊಮೆಟೋಗೆ ೫ ಲಕ್ಷ ಬಿಡುಗಡೆ ಮಾಡಿ ನಕಲಿ ಬಿತ್ತನೆ ಬೀಜ, ಔಷದಿಗಳ ನಿಯಂತ್ರಣಕ್ಕೆ ಕಾನೂನು ಜಾರಿ ಮಾಡಿ ಸಂಕಷ್ಟದಲ್ಲಿರುವ ರೈತರನ್ನು ರಕ್ಷಣೆ ಮಾಡಬೇಕೆಂದು ರೈತ ಸಂಘದಿಂದ ಬಿಂಗಿ ಬೆಳೆ ಸಮೇತ ಹೋರಾಟ ಮಾಡಿ ತೋಟಗಾರಿಕೆ ಕೃಷಿ ಅಧಿಕಾರಿಗಳ ಮುಖಾಂತರ ಕೃಷಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದರು.
ಕೃಷಿ ಕ್ಷೇತ್ರವನ್ನು ನಿರ್ಲಕ್ಷೆ ಮಾಡುತ್ತಾ ಬಂದರೆ ಮುಂದಿನ ದಿನಗಳಲ್ಲಿ ತುತ್ತು ಅನ್ನಕ್ಕಾಗಿ ಹಸಿವೆಂಬ ಮಹಾಮಾರಿ ದೇಶದಲ್ಲಿ ಅಲ್ಲೋಲ ಕಲ್ಲೋಲ ಜೊತೆಗೆ ಆಹಾರಕ್ಕಾಗಿಯೇ ಮೂರನೇ ಮಹಾಯುದ್ದ ರೈತರಿಂದಲೆ ಪ್ರಾರಂಭವಾಗುವ ಕಾಲ ದೂರವಿಲ್ಲವೆಂದು ಸರ್ಕಾರಗಳಿಗೆ ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಎಚ್ಚರಿಕೆ ನೀಡಿದರು.
ಬರ ಹಾಗೂ ಮುಂಗಾರು ಮಳೆಯಿಂದ ಬೆಳೆ ನಷ್ಟ ನಿಯಂತ್ರಣಕ್ಕೆ ಬಾರದ ಟೊಮೆಟೋ ಬೆಳೆಯ ಬಿಂಗಿ ರೋಗದಿಂದ ತತ್ತರಿಸಿರುವ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಉಸ್ತುವಾರಿ ಸಚಿವರು ಮುಂಗಾರು ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆ ಜಿಲ್ಲಾಡಳಿತ ಸಹ ರೈತರ ಸಮಸ್ಯೆಗಳನ್ನು ನಿರ್ಲಕ್ಷ ಮಾಡಲು ಕಾರಣವಾದರೂ ಏನೂ ಎಂದು ಹೋರಾಟದಲ್ಲಿ ಪ್ರಶ್ನಿಸಿದರು.
ಕೃಷಿಗೆ ಸಂಬಂದಪಟ್ಟ ಇಲಾಖೆಗಳ ನಿಯಂತ್ರಣವಿಲ್ಲದ ಅನದೀಕೃತ ನರ್ಸರಿ ಮಾಲೀಕರು ಕಳಪೆ ಬಿತ್ತನೆ ಬೀಜ ಕಂಪನಿಗಳ ಜೊತೆ ಶಾಮೀಲಾಗಿ ರೈತರಿಗೆ ಗುಣಮಟ್ಟವಿಲ್ಲದ ಕಳಪೆ ಸಸಿಗಳನ್ನು ಯಾವುದೇ ಬಿಲ್ ನೀಡದೆ ವಿತರಣೆ ಮಾಡಿ ವಂಚನೆ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯುತ್ತಿರುವ ಟೊಮೆಟೋ ಬೆಳೆಗೆ ಉತ್ತಮ ಬೆಲೆ ಇದ್ದರೂ ಗಿಡದಲ್ಲಿ ಫಸಲಿಲ್ಲದೆ ಹಾಕಿದ ಬಂಡವಾಳ ಕೈಗೆ ಸಿಗದೆ ಮೂರು ತಿಂಗಳ ಬೆವರ ಹನಿಯ ಶ್ರಮ ಅಧಿಕಾರಿಗಳ ಬೇಜವಬ್ದಾರಿಗೆ ಕಳೆದುಹೋಗುತ್ತಿದೆ ಎಂದು ಆರೋಪ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಮತ್ತು ಕೃಷಿ ಅಧಿಕಾರಿ ಟೋಮೆಟೋ ಬೆಳೆಗೆ ಬಾದಿಸುತ್ತಿರುವ ಬಿಂಗಿ ರೋಗ ನಿಯಂತ್ರಣಕ್ಕೆ ಸಂಬಂಧಪಟ್ಟ ವಿಜ್ಞಾನಿಗಳ ಸಲಹೆ ಪಡೆದು ಸಮಸ್ಯೆ ಬಗೆಹರಿಸುವ ಜೊತೆಗೆ ನಕಲಿ ಬಿತ್ತನೆ ಬೀಜ ಕೀಟನಾಶಕ ಅನಧೀಕೃತ ನರ್ಸರಿಗಳ ವಿರುದ್ದ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಉಪಾದ್ಯಕ್ಷ ಕೆ,ನಾರಾಯಣಗೌಡ, ಮಗರಲ್ ಶ್ರೀನಿವಾಸ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಗೀರೀಶ್, ಯಲ್ಲಪ್ಪ, ಹರೀಶ್, ಶಿವಾರೆಡ್ಡಿ, ಸುಪ್ರೀಂ ಚಲ, ಮುದುವಾಡಿ ಚಂದ್ರಪ್ಪ, ಶೈಲಜ, ರಾಧ, ನಾಗರತ್ನ, ವಕ್ಕಲೇರಿ ಹನುಮಯ್ಯ, ಇದ್ದರು.