ನಗರೋತ್ಥಾನ ಕಾಮಗಾರಿ ಪೂರ್ಣಕ್ಕೆ 3 ತಿಂಗಳ ಗಡುವು
ಕೋಲಾರ:೨೫:ನಗರಸಭೆ ವ್ಯಾಪ್ತಿಯ ೩೫ ವಾರ್ಡ್‌ಗಳಲ್ಲಿ ನಗರೋತ್ಥಾನ ಯೋಜನೆಯ ಮೂಲಕ ಹಮ್ಮಿಕೊಂಡಿರುವ ಕಾಮಗಾರಿಗಳನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ನೀವೇ ಹೇಳಿದ ಸಮಯಕ್ಕೆ ಪೂರ್ಣವಾಗಿಲ್ಲದೇ ಹೋದರೆ ಪರಿಣಾಮ ಬೇರೆ ರೀತಿಯಲ್ಲಿ ಇರುತ್ತದೆ ಎಂದು ಗುತ್ತಿಗೆದಾರನಿಗೆ ಶಾಸಕ ಕೊತ್ತೂರು ಜಿ ಮಂಜುನಾಥ್ ಗಡುವು ನೀಡಿದರು.
ಸೋಮವಾರ ನಗರಸಭೆಯ ಸಭಾಂಗಣದಲ್ಲಿ ನಗರಸಭೆಗೆ ಸಂಬಂಧಿಸಿದ ಕುಂದುಕೊರತೆಗಳ ಹಾಗೂ ಕಾಮಗಾರಿಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಭಿವೃದ್ಧಿಗೆ ಹಣದ ಕೊರತೆಯಿಲ್ಲ ಕಾಮಗಾರಿಗಳು ಆಗದೆ ಸಮಸ್ಯೆ ತಂದಾಗ ಅಭಿವೃದ್ಧಿ ಹೇಗೆ ಸಾಧ್ಯ ನಗರಸಭೆ ವ್ಯಾಪ್ತಿಯ ಎಲ್ಲಾ ಅಧಿಕಾರಿಗಳು ಪ್ರತಿನಿತ್ಯ ಕಾಮಗಾರಿಗಳ ಜೊತೆಗೆ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಬೇಕು ಕೇವಲ ಕಛೇರಿಗೆ ಮಾತ್ರ ಸೀಮಿತವಾಗಬಾರದು ಗುತ್ತಿಗೆದಾರನಿಗೆ ವಹಿಸಿದ್ದೇವೆ ಅವರೇ ನೋಡಿಕೊಳ್ಳತ್ತಾರೆ ಅಂತ ಕೂತರೆ ಜನರಿಂದ ವೋಟ್ ಹಾಕಿಸಿಕೊಂಡ ತಪ್ಪಿಗೆ ಜನಪ್ರತಿನಿಧಿಗಳನ್ನು ಬೈದುಕೊಂಡು ಹೋಗತ್ತಾರೆ ಜನರಿಗೋಸ್ಕರ ಇದ್ದೇವೆ ಎಂಬುದನ್ನು ಅರ್ಥಮಾಡಿಕೊಂಡು ಹೋಗಿ ಕೆಲಸ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು
ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಛಾಶಕ್ತಿ ಇಲ್ಲದೇ ಹೋದರೆ ವರ್ಗಾವಣೆ ಮಾಡಿಕೊಂಡು ಹೋಗಿ ನಿಮ್ಮ ಜಾಗಕ್ಕೆ ಕೆಲಸ ಮಾಡೋರನ್ನು ಕರೆಸಿಕೊಳ್ಳುವುದು ನಮಗೆ ಗೊತ್ತಿದೆ ನಗರದಾದ್ಯಂತ ಬೀದಿದ್ವೀಪಗಳಿಗೆ ಸಂಬಂಧಿಸಿದಂತೆ ಸರ್ವೆ ಮಾಡಿಸಿ ಎಷ್ಟು ಅವಶ್ಯಕತೆ ಇದೆ ಕೂಡಲೇ ಗಮನಕ್ಕೆ ತನ್ನಿ ಜೊತೆಗೆ ಪ್ರತಿ ತಿಂಗಳು ಸಮಸ್ಯೆಗಳಿಗೆ ಸಂಬಂಧಿಸಿದಂತೆಯೇ ಕೊನೆಯ ವಾರ ಸಭೆ ನಡೆಯಲಿದ್ದು ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡುವಂತೆ ತಿಳಿಸಿದರು, ಸದಸ್ಯ ಪ್ರಸಾದ್ ಬಾಬು ಮಾತನಾಡಿ ನಗರೋತ್ಥಾನ ಯೋಜನೆಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆಯಾಗಬೇಕು ಎಂದು ಒತ್ತಾಯಿಸಿದರು.ಸದಸ್ಯರಾದ ರಾಕೇಶ್, ಸೂರಿ, ಮುರಳಿಗೌಡ ಮಾತನಾಡಿ,ಯುಜಿಡಿಯ ಅನಾವಶ್ಯಕವಾಗಿ ತೋಡಿದ ಗುಂಡಿಗಳನ್ನು ಕೂಡಲೇ ಮುಚ್ಚಬೇಕು ಒತ್ತಾಯಿಸಿದರು. ಸಭೆಯಲ್ಲಿ ನಗರಸಭೆ ಆಯುಕ್ತ ಶಿವಾನಂದ್, ಯೋಜನಾ ನಿರ್ದೇಶಕಿ ಅಂಬಿಕಾ, ಇಂಜಿನಿಯರ್ ಶ್ರೀನಿವಾಸ್, ಸೇರಿದಂತೆ ಗುತ್ತಿಗೆದಾರರು ನಗರಸಭೆ ಸದಸ್ಯರು ಇದ್ದರು