ಹಾಲು ಉಪ ಉತ್ಪನ್ನಗಳ ತಯಾರಿಕೆಗೆ ಒತ್ತುನೀಡಿ
ಚನ್ನಪಟ್ಟಣ.ಜೂ೨೫: ಹಾಲು ಅಮೂಲ್ಯವಾಗಿದ್ದು ಒಂದೊಂದು ಹನಿ ಹಾಲು ಉತ್ಪಾದನೆಯಲೂ ರೈತರ ಶ್ರಮವಿದೆ. ಈ ನಿಟ್ಟಿನಲ್ಲಿ ರೈತರಿಗೆ ಉತ್ತಮ ಬೆಲೆ ನೀಡಲು ಕೆಎಂಎಫ್ ಹಾಲಿನ ಉಪ ಉತ್ಪನ್ನಗಳ ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಒತ್ತಾಯಿಸಿದರು.
ತಾಲೂಕಿನ ಬಮೂಲ್ ಶಿಬಿರದಿಂದ ಆಯೋಜಿಸಿದ್ದ ಹಾಲು ಉತ್ಪಾದಕ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿ, ಹಾಲು ಅತ್ಯಮೂಲ್ಯವಾದ ವಸ್ತುವಾಗಿದ್ದು, ಹಾಲಿನ ಉತ್ಪಾದನೆಗೆ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಪೂರಕ ವಾತಾವರಣ ಇದೆ. ಈ ನಿಟ್ಟಿನಲ್ಲಿ ಹಾಲಿನಿಂದ ಉಪಉತ್ಪನ್ನಗಳನ್ನು ತಯಾರಿಸುವಲ್ಲಿ ಹೆಚ್ಚು ಒತ್ತು ನೀಡಬೇಕಿದೆ. ಈ ನಿಟ್ಟಿನಲ್ಲಿ ಹಾಲು ಮತ್ತು ಸಕ್ಕರೆಗೆ ಖಾತೆಯನ್ನು ತೆರೆಯಬೇಕು ಎಂಬ ಒತ್ತಾಯ ಹಿಂದಿನಿಂದಲೂ ಇದೆ. ರೈತರ ಶ್ರಮದಿಂದ ಉತ್ಪಾದನೆಯಾಗುವ ಹಾಲಿಗೆ ಅವರ ಶ್ರಮಕ್ಕೆ ತಕ್ಕ ಫಲ ಸಿಗುವಂತೆ ಆಗಬೇಕು ಎಂದರೆ ವೈಜ್ಞಾನಿಕ ಬೆಲೆಯನ್ನು ನೀಡಬೇಕಿದೆ. ಅಮೂಲ್‌ನಷ್ಟು ವೇಗದಲ್ಲಿ ನಮ್ಮ ನಂದಿನಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಾರುಕಟ್ಟೆ ವಿಸ್ತರಣೆ ಹಾಗೂ ಉಪ ಉತ್ಪನ್ನಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲು ಮುಂದಾಗಬೇಕು ಎಂದರು.
ಹಾಲು ಉತ್ಪಾದಕರು ಶ್ರಮಜೀವಿಗಳಾಗಿದ್ದು ಅವರ ಶ್ರಮಕ್ಕೆ ಪ್ರತಿಫಲ ನೀಡುವುದು ಸರ್ಕಾರ ಮತ್ತು ಒಕ್ಕೂಟದ ಜವಾಬ್ದಾರಿಯಾಗಿದೆ. ಆದರೆ ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದ ರೈತರು ಹೈನುಗಾರಿಕೆಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರೈತರ ಬೆನ್ನೆಲುಬು ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರೈತರಿಗೆ ರಾಜ್ಯ ಸರ್ಕಾರಗಳಿಂದ ನೀಡುತ್ತಾ ಬಂದಿದ್ದ ೫ ರೂ ಪ್ರೋತ್ಸಾಹ ಧನವನ್ನು ಕಳೆದ ಒಂದು ವರ್ಷಗಳಿಂದಲೂ ಬಾಕಿ ಉಳಿಸಿಕೊಂಡಿದೆ. ಜೊತೆಗೆ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಗೆ ಮಾಡಿ ಸಾರಿಕೆ ಮೇಲೆ ಪರಿಣಾಮ ಬೀರಿದ್ದು ಇದರಿಂದ ಪಶುಆಹಾರ ಮತ್ತು ಮೇವಿನ ಬೆಲೆ ದುಭಾರಿಯಾಗಿದ್ದು, ರೈತgರಿಗೆ ನೀಡುತ್ತಿರುವ ಹಾಲಿನ ದರದಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ರೈತರು ಹೈನುಗಾರಿಕೆಯಿಂದ ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಯೋಗೇಶ್ವರ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
೬೧೮ ಕೋಟಿ ರೂ. ಪ್ರೋತ್ಸಾಹ ಧನವನ್ನು ಗ್ಯಾರಂಟಿ ಭಾಗ್ಯಗಳಿಗೆ ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಹೆಚ್.ಡಿ.ಕುಮಾರಸ್ವಾಮಿಅವರು ಕೇಂದ್ರ ಸಚಿವರಾದ ಬಳಿಕ ಮೈಸೂರು ಭಾಗದಲ್ಲಿ ಟೆಸ್ಲಾ ಕಂಪನಿಯನ್ನು ತೆರೆಯಲು ಅನುಮತಿ ನೀಡುವ ಬಗ್ಗೆ ಒಪ್ಪಂದದ ಚರ್ಚೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಈ ಕಂಪನಿಯಲ್ಲಿ ತಾಲೂಕಿನ ಹಾಲು ಉತ್ಪಾದಕ ರೈತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ಸಂದರ್ಭದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರ ಮತ್ತು ನೌಕರರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮರಣ ಹೊಂದಿದ ಸಂಘದ ಸದಸ್ಯರು ಹಾಗೂ ರಾಸುಗಳಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಬಮೂಲ್ ಉಪಾಧ್ಯಕ್ಷರಾದ ಎಂ.
ಮಂಜುನಾಥ್, ಬಮೂಲ್ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎಸ್.ಟಿ. ಸುರೇಶ್, ಪ್ರಧಾನ ವ್ಯವಸ್ಥಾಪಕರಾದ(ಶೇ.ತಾಂ) ಕೆ.ಸಿ.ಶ್ರೀಧರ್, ವ್ಯವಸ್ಥಾಪಕರಾದ(ಶೇ.ತಾಂ) ಡಾ. ಎನ್. ಶಿವಶಂಕರ್, ಬಮೂಲ್ ಕಲ್ಯಾಣ ಟ್ರಸ್ಟ್ ಸಿಇಒ ಡಾ. ಸಿ. ಶಿವರಾಮ್, ಬಮೂಲ್ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಡಾ. ಎಲ್.ಎನ್. ವೆಂಕಟಸ್ವಾಮಿರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಟಿಎಪಿಸಿಎಂಎಸ್ ಅಧ್ಯಕ್ಷ ಚನ್ನೇಗೌಡ(ಅರಳಾಪುರ ಸುರೇಶ್), ವಡ್ಡರಹಳ್ಳಿ ರಾಜಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್. ಆನಂದಸ್ವಾಮಿ, ಯಾಲಕ್ಕಿಗೌಡ, ಭಾನುಪ್ರಸಾದ್, ಮಹೇಶ್‌ಗೌಡ, ನಗರಸಭಾ ಸದಸ್ಯ ಕೆ.ಮಂಜುನಾಥ್, ಬಮೂಲ್ ಶಿಬಿರದ ಉಪವ್ಯವಸ್ಥಾಪಕ ಹೇಮಂತ್‌ಕುಮಾರ್ ಹಾಜರಿದ್ದರು.