ರಫ್ತಿನಿಂದ ದೇಶದ ಆದಾಯ ಹೆಚ್ಚಳ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.25:- ರಪ್ತು ಮಾಡುವುದರಿಂದ ವಿದೇಶಿ ವಿನಿಮಯದ ಜತೆಗೆ ದೇಶದ ಆದಾಯವೂ ಹೆಚ್ಚಾಗುತ್ತದೆ. ಅಲ್ಲದೆ ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ.ದಿನೇಶ್ ತಿಳಿಸಿದರು.
ಸೋಮವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ರಪ್ತು ನಿರ್ವಹಣಾ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಉದ್ದಿಮೆದಾರರಿಗೆ ನಾನು ಪ್ರತಿದಿನ ಹೊಸತನ್ನು ಕಲಿಯಬೇಕು ಎನ್ನುವ ಹಂಬಲ ಇರಬೇಕು.
ದೇಶದಲ್ಲಿ 778 ಮಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ರಪ್ತು ಮಾಡಿದ್ದು, 860 ಮಿಲಿಯನ್ ಡಾಲರ್ ಮೊತ್ತದ ಸರಕನ್ನು ಆಮದು ಮಾಡಿಕೊಂಡಿದ್ದೇವೆ. ಕರ್ನಾಟಕ ರಪ್ತು ಮಾಡುವುದರಲ್ಲಿ 4 ನೆ ಸ್ಥಾನದಲ್ಲಿ ಇದೆ. ನಮ್ಮ ರಾಜ್ಯ ರಫ್ತಿನಲ್ಲಿ ಮೊದಲ ಸ್ಥಾನಕ್ಕೆ ಬರಬೇಕು ಎಂದರು.
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ಜಂಟಿ ನಿರ್ದೇಶಕ ಸಿ.ಎಸ್.ಬಾಬು ನಾಗೇಶ್ ಮಾತನಾಡಿ, ತಾವೆಲ್ಲರೂ ಯುವ ಉದ್ಯಮಿಗಳು. 6 ದಿನಗಳ ಕಾಲ ಹಮ್ಮಿಕೊಂಡಿರುವ ರಪ್ತು ನಿರ್ವಹಣಾ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಿ. ರಪ್ತು ಕೈಗಾರಿಕೆಗಳ ಆರ್ಥಿಕ ಆದಾಯ ಹೆಚ್ಚಿಸುತ್ತದೆ. ಇದರಿಂದ ಹೆಚ್ಚಿನ ಉತ್ಪಾದನೆ ಮಾಡಿ ಕೈಗಾರಿಕೆ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಮೈಸೂರು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಮಾತನಾಡಿ, ಮೈಸೂರಿನಲ್ಲಿ ರಪ್ತು ಕೇಂದ್ರ ಸ್ಥಾಪನೆ ಆಗುತ್ತಿದೆ. ಕಟ್ಟಡ ಈಗಾಗಲೇ ಪ್ರಾರಂಭವಾಗಿದೆ. ರಫ್ತಿನಲ್ಲಿ ಪ್ಯಾಕಿಂಗ್ ಉತ್ತಮ. ನಮ್ಮ ವಸ್ತುಗಳು ತಲುಪಬೇಕಾದ ಸ್ಥಳವನ್ನು ಕೆಡದಂತೆ ಸಕಾಲದಲ್ಲಿ ತಲುಪಬೇಕು. ರಪ್ತು ದೇಶದ ಆದಾಯವನ್ನು ಹೆಚ್ಚಿಸುತ್ತದೆ. ರಫ್ತಿನಲ್ಲಿ ಸಣ್ಣ ಕೈಗಾರಿಕೆಗಳ ಪಾಲು ಶೇ.45 ರಷ್ಟು ಇದೆ. ನೋಟು ಮುದ್ರಣವನ್ನು ಸಹ ಮೈಸೂರಿನಲ್ಲಿ ಮಾಡುತ್ತೇವೆ. ಮೈಸೂರು ಕೈಗಾರಿಕೆಗಳ ಸ್ಥಾಪನೆಗೆ ಉತ್ತಮ ಅವಕಾಶಗಳನ್ನು ಕಲ್ಪಿಸಿ ಕೊಟ್ಟಿದೆ. ಸೆಮಿ ಕಂಡಕ್ಟರ್‍ಗಳ ಉತ್ಪಾದನಾ ಕೇಂದ್ರ ಸ್ಥಾಪನೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ.ಬಿ.ಲಿಂಗರಾಜು ಮಾತನಾಡಿ, ಯಾವುದೇ ಪದಾರ್ಥವನ್ನು ನಾವು ರಪ್ತು ಮಾಡಲು ರಾಸಾಯನಿಕ ಮುಕ್ತವಾಗಿ ಇರಬೇಕು. ನಾವು ರಪ್ತು ಮಾಡುವ ಉತ್ಪಾದನೆ ಗುಣಮಟ್ಟದಿಂದ ಕೂಡಿರಬೇಕು. ಮೈಸೂರಿನಲ್ಲಿ ಈಗಾಗಲೇ ಸುಮಾರು 165 ಜನ ರಪ್ತು ಮಾಡುತ್ತಾ ಇದ್ದಾರೆ. ಇನ್ನು ಹೆಚ್ಚಿನ ಜನರು ದೇಶ ವಿದೇಶಕ್ಕೆ ರಪ್ತು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ರಪ್ತು ಮಾಹಿತಿ ಕೇಂದ್ರದ ಉಪ ನಿರ್ದೇಶಕಿ ಮೇಘಲಾ ಸೇರಿದಂತೆ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.