ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.25:- ಮಹಾರಾಣಿ ಮಹಿಳಾ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದಲ್ಲಿನ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಸಮಸ್ಯೆ ಮತ್ತು ಶುಲ್ಕಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಎಐಡಿಎಸ್‍ಓ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿವಿಯ ಕ್ರಾಫರ್ಡ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿದ್ಯಾರ್ಥಿಗಳಿಂದ 600 ರೂ ಶುಲ್ಕ ಪಡೆದು ದಾಖಲಾತಿ ಮಾಡಿಕೊಂಡಿದ್ದಾರೆ. ಅಲ್ಲದೆ ಸಂಪೂರ್ಣ ವಿದ್ಯಾರ್ಥಿ ವೇತನ ಬಂದಿಲ್ಲ. ಬದಲಾಗಿ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಸ್ನಾತಕೋತ್ತರ ಓದುತ್ತಿರುವ ವಿದ್ಯಾರ್ಥಿಗಳಿಗೆ 2 ಸಾವಿರ, 4 ಸಾವಿರ ರೂ ಮಾತ್ರ ಬಂದಿದೆ. ಆದರೆ, ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ 11 ಸಾವಿರ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ 19,498 ರೂ ಶುಲ್ಕ ಕಟ್ಟಬೇಕೆಂದು ಆದೇಶ ಹೊರಡಿಸಿದ್ದಾರೆ ಎಂದು ಕಿಡಿ ಕಾರಿದರು.
ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಮೊದಲ ಮೂರು ಸೆಮಿಸ್ಟರ್‍ಗಳಲ್ಲಿ ಯಾವುದೇ ಪರೀಕ್ಷಾ ಶುಲ್ಕ ಕಟ್ಟಲು ಹೇಳಿಲ್ಲ. ಆದರೆ, ಏಕಾಏಕಿ ಮೂರೂ ಸೆಮಿಸ್ಟರ್‍ಗಳ ಪರೀಕ್ಷಾ ಶುಲ್ಕವನ್ನು ಈಗಲೇ ಕಟ್ಟಬೇಕೆಂದು ಒತ್ತಾಯಿಸುತ್ತಿದ್ದಾರೆ.
ಆದರೆ, ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗೆ ಯುಯುಸಿಎಂಎಸ್ ಪೆÇೀರ್ಟಲ್‍ನಲ್ಲಿ ಪರೀಕ್ಷಾ ಶುಲ್ಕ ಕಟ್ಟುವಂತೆ ತೋರಿಸುತ್ತಿಲ್ಲ. ಇದು ವಿದ್ಯಾರ್ಥಿಗಳಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಜತೆಗೆ ದಿಢೀರನೆ ಶುಲ್ಕ ಪಾವತಿಸಿ ಎಂದು ಹೇಳಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ. ಹೀಗಾಗಿ ಕೂಡಲೇ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಉಪಾಧ್ಯಕ್ಷರುಗಳಾದ ನಿತಿನ್, ಸ್ವಾತಿ, ಮಹಾರಾಣಿ ಸ್ನಾತಕೋತ್ತರ ಕಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.