ಮಹಿಳೆಯರಿಗಾಗಿ ಕ್ಯಾನ್ಸರ್‌ ಜಾಗೃತಿ ಸಪ್ತಾಹ
ಕಲಬುರಗಿ: ಜೂ.24: ಇಂದಿನ ಮಹಿಳೆಯರು ತಮ್ಮ ಮನೆ ಜವಾಬ್ದಾರಿಗೆ ಅಷ್ಟೆ ಸೀಮಿತವಾಗಿರದೆ, ತಮ್ಮ ಆರೋಗ್ಯದ ಕಡೆಗೆ ಗಮನ ಕೊಡಬೇಕು, ಪ್ರತಿ ದಿನ ಯೋಗ, ಸಮತೋಲನ ಆಹಾರ ಹಾಗೂ ನಿಯಮಿತ ಆರೋಗ್ಯದ ತಪಾಸಣೆ ಮಾಡುವುದರಿಂದ ನಮ್ಮ ಆರೋಗ್ಯ ಮತ್ತು ನಮ್ಮ ದೇಶವು ಸಹ ಆರೋಗ್ಯಕರ ದೇಶವಾಗುತ್ತದೆ ಎಂದು ಕಲಬುರಗಿಯ ಪ್ರೊಬೆಷನರಿ ಐ.ಎ.ಎಸ್. ಅಧಿಕಾರಿ ಮೀನಾಕ್ಷೀ ಆರ್ಯಾ ಹೇಳಿದರು.
ಅವರು ಜೂನ್‌ 24 ರಂದು ನಗರದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಕಲಬುರಗಿ ಜಿಲ್ಲಾ ಶಾಖೆಯು ಸಹಯೋಗದಲ್ಲಿ ಹಮ್ಮಿಕೊಂಡ “ಮಹಿಳೆಯರಿಗಾಗಿ ಕ್ಯಾನ್ಸರ್‌ ಜಾಗೃತಿ ಸಪ್ತಾಹ” ವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಕ್ಯಾನ್ಸರ್ ಕುರಿತು ವಿಶೇಷ ಉಪನ್ಯಾಸ ನೀಡಿರುವ ಡಾ. ಶೃತ್ತಿ ವ್ಹಿ. ಸಹ ಪ್ರಾಧ್ಯಾಪಕರು, ಕಿದ್ವಾವಿ ಕ್ಯಾನ್ಸರ್‌ ಆಸ್ಪತ್ರೆ, ಕಲಬುರಗಿ ಮತ್ತು ಡಾ. ಕಾವೇರಿ ಡಿ. ಓ.ಬಿ.ಜಿ. ಜಿಮ್ಸ್‌ ಆಸ್ಪತ್ರೆ, ಕಲಬುರಗಿ ಇವರು ಮಹಿಳೆಯರಿಗೆ ಆಗುವ ಸ್ತನ ಕ್ಯಾನ್ಸರ್‌, ಹೆಚ್.ಪಿ.ವಿ ಮತ್ತು ಗರ್ಭಕಂಠದ ಕಾನ್ಯರ್‌ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು ಹಾಗೂ ಅದನ್ನು ಯಾವ ಹಂತದಲ್ಲಿ ಇದ್ದಾಗ ಚಿಕಿತ್ಸೆ ಕೊಡಬಹುದು ಎನ್ನುವದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡುವುದಲ್ಲದೆ ಅದನ್ನು ತಡೆಗಟ್ಟುವ ವ್ಯಾಕ್ಸಿನ ಬಗ್ಗೆ ಸಹ ತಿಳಿಸಿದರು. ಈ ವ್ಯಾಕ್ಸಿನ ಸಹಜವಾಗಿ ಸ್ತ್ರೀರೋಗ ತಜ್ಞರು ಮತ್ತು ಮಕ್ಕಳ ತಜ್ಞರ ಹತ್ತಿರ ಲಭ್ಯವಿರುವುದಾಗಿ ತಿಳಿಸುತ್ತಾ ಇದರಿಂದ ಯಾವುದೆ ಅಡ್ಡ ಪರಿಣಾಮಗಳು ಇಲ್ಲ ಹಾಗಾಗಿ ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿ.ಟಿ.ಯು ನ ನಿರ್ದೇಶಕರಾದ ಡಾ. ಬಸವರಾಜ ಗಾದಗೆ ಅವರಿಗೆ 2023 ನೇ ಸಾಲಿನ ಪ್ರತಿಷ್ಟಿತ ಐ.ಎಸ್.ಟಿ.ಇ ಗೌರವ ಫೆಲೋಶಿಪ್ ಪ್ರಶಸ್ತಿ ದೊರೆತ ಪ್ರಯುಕ್ತ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆ ಮೇಲೆ ರೆಡ್‌ ಕ್ರಾಸ್‌ ಸಂಸ್ಥೆಯ ಸಭಾಪತಿಗಳಾದ ಶ್ರೀ ಅರುಣಕುಮಾರ ಲೋಯಾ, ಉಪಸಭಾಪತಿ ಶ್ರೀಮತಿ ಭಾಗ್ಯಲಕ್ಷ್ಮೀ ಎಮ್. ಗೌರವ ಕಾರ್ಯದರ್ಶಿ ಶ್ರೀ ರವೀಂದ್ರ ಶಾಬಾದಿ, ಆರೋಗ್ಯ ಸಮಿತಿ ಸಂಚಾಲಕರಾದ ಶ್ರೀ ಪರಮೇಶ್ವರ ಶೆಟಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸಂಚಲಕರಾದ ಶ್ರೀಮತಿ ನೈನಾ ಸೇಠಿಯಾ, ವಿ.ಟಿ.ಯು ನ ಪ್ರಾಧ್ಯಾಪಕರಾದ ಡಾ. ಶಂಬುಲಿಂಗಪ್ಪ ಬಿ. ಅವರು ಇದ್ದರು. ಕಾರ್ಯಕ್ರಮ ಅಧಿಕಾರಿ ಡಾ. ಶರಣಗೌಡ ಬಿರಾದಾರ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.