ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಎರಡು ತಾಸು ತಪಾಸಣೆ
ಕಲಬುರಗಿ,ಜೂ.24-ನಗರದ ಸೇಡಂ ರಸ್ತೆಯಲ್ಲಿರುವ ಕಲಬುರಗಿ ವಿಮಾನ ನಿಲ್ದಾಣಕ್ಕೆ ಇಂದು ಬೆಳಿಗ್ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು, ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಸುಮಾರು ಎರಡು ತಾಸುಗಳ ಕಾಲ ತಪಾಸಣೆ ನಡೆಸಿದರು.
ವಿಮಾನ ನಿಲ್ದಾಣದ ಕಟ್ಟಡದಲ್ಲಿ ಬಾಂಬ್ ಇರಿಸಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಚಿಲಕಾ ಮಹೇಶ್ ಅವರಿಗೆ ಬೆಳಿಗ್ಗೆ 7ರ ಸುಮಾರಿಗೆ ಇ-ಮೇಲ್ ಬಂದಿದ್ದು, ತಕ್ಷಣವೇ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದರು.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಬಂದಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇತರೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಕೆಳಗೆ ಇಳಿಸದೆ ತಪಾಸಣೆ ಮಾಡಲಾಯಿತು. ಆ ಬಳಿಕ ಪ್ರಯಾಣಿಕರು ಕೆಳಗೆ ಇಳಿದರು. ಶ್ವಾನದಳ, ಹೆಚ್ಚಿನ ಪೊಲೀಸರ ನಿಯೋಜನೆ, ಬ್ಯಾಗ್‍ಗಳ ತಪಾಸಣೆಯಿಂದಾಗಿ ನಿಲ್ದಾಣದಲ್ಲಿನ ಪ್ರಯಾಣಿಕರು ಕೆಲ ಕಾಲ ಆತಂಕಕ್ಕೊಳಗಾಗಿದ್ದರು.
“ಬಾಂಬ್ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರನ್ನು ಹೊರಗೆ ಬಿಡಲಿಲ್ಲ. ನನಗೂ ಅರ್ಧಗಂಟೆ ಸಮಯ ವಿಳಂಭವಾಯಿತು. ಈ ರೀತಿಯ ಕರೆಗಳು ಬರುತ್ತಿರುತ್ತವೆ. ಕೆಲವರು ಸುಮ್ಮನೆ ಅನಾಮಧೇಯ ಕರೆ ಮಾಡುತ್ತಿರುತ್ತಾರೆ. ವಿಮಾನ ನಿಲ್ದಾಣದ ಸಿಬ್ಬಂದಿಗಳು ತಪಾಸಣೆ ನಡೆಸಿದರು. ಇದರಿಂದ ನನಗೆ ಅಧಿಕಾರಿಗಳ ಜೊತೆ ಸಭೆ ನಡೆಸಲು ನಿಗದಿತ ಸಮಯಕ್ಕಿಂತ ಅರ್ಧಗಂಟೆ ವಿಳಂಬವಾಗಿದ್ದು, ಬಿಟ್ಟರೆ ಮತ್ತೇನಾಗಿಲ್ಲ. ಅಲ್ಲಿ ಯಾವುದೇ ರೀತಿಯ ಆತಂಕ ಇರಲಿಲ್ಲ. ಅದೊಂದು ಅನಾಮಧೇಯ ಕರೆ ಅನಿಸುತ್ತೆ” ಎಂದು ಬಾಂಬ್ ಬೆದರಿಕೆ ಇ-ಮೇಲ್ ಬಂದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿಯೇ ಇದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
“ಬೆಳಿಗ್ಗೆ 7ರ ಸುಮಾರಿಗೆ ನನ್ನ ಇ-ಮೇಲ್ ಐಡಿಗೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಸಂದೇಶವೊಂದು ಅನಾಮಧೇಯ ವ್ಯಕ್ತಿಯಿಂದ ಬಂದಿದೆ. ಬಾಂಬ್ ನಿಷ್ಕ್ರೀಯ ದಳ, ಶ್ವಾನದಳ, ಪೊಲೀಸರು ನಿಲ್ದಾಣಕ್ಕೆ ಬಂದು ಸಂಪೂರ್ಣವಾಗಿ ಪರಿಶೀ¯ನೆ ನಡೆಸಿದರು. ಪ್ರಯಾಣಿಕರ ಬ್ಯಾಗ್‍ಗಳ ತಪಾಸಣೆಯೂ ಮಾಡಿದರು. ಯಾವುದೇ ಸ್ಪೋಟಕ ವಸ್ತು ಕಂಡುಬಂದಿಲ್ಲ” ಎಂದು ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ್ ತಿಳಸಿದರು.