ಕನ್ನಡ, ಶರಣ ಸಾಹಿತ್ಯಕ್ಕೆ ಜಯದೇವಿ ತಾಯಿ ಲಿಗಾಡೆ ಕೊಡುಗೆ ಅನನ್ಯ
ಕಲಬುರಗಿ:ಜೂ.24: ಕರ್ನಾಟಕದ ಗಡಿಭಾಗದಲ್ಲಿನ ಮರಾಠಿ ಪ್ರಾಬಲ್ಯದಿಂದ ಕನ್ನಡವನ್ನು ಉಳಿಸಿ, ಬೆಳೆಸುವಲ್ಲಿ ಮತ್ತು ಶರಣ ಸಾಹಿತ್ಯದ ರಕ್ಷಕರಾಗಿ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ಶರಣೆ ಜಯದೇವಿ ತಾಯಿ ಲಿಗಾಡೆಯವರು ನೀಡಿದ್ದಾರೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಿವನಗರದಲ್ಲಿರುವ ‘ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ಶರಣೆ ಜಯದೇವಿ ತಾಯಿ ಲಿಗಾಡೆಯವರ 112ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಆಧ್ಯಾತ್ಮ ಚಿಂತಕಿ, ಸಮಾಜ ಸೇವಕಿ, ಸಾಹಿತ್ಯ ಸಾಧಕಿಯಾಗಿ ‘ಗಡಿನಾಡುದುರ್ಗಾ’ ಎಂಬ ಬಿರುದಾಂಕಿತ ಲಿಗಾಡೆಯವರು ಬಹುಮುಖ ವ್ಯಕ್ತಿತ್ವದ ಮೇರು ಸಾಧಕಿಯಾಗಿದ್ದಾರೆ. ಕರ್ನಾಟಕ ಏಕೀಕರಣದಲ್ಲಿ ಮುಂಚೂಣಿ ಹೋರಾಟ ಮಾಡುವ ಮೂಲಕ ಅವಿಸ್ಮರಣೀಯರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥ ಅಮರ ಜಿ.ಬಂಗರಗಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರ, ಶಿಕ್ಷಕಿ ನಿಂಗಮ್ಮ ಬಿರಾದಾರ, ಪ್ರಮುಖರಾದ ರೇಖಾ ಬಿ.ಪಾಟೀಲ, ಮಂಜುಳಾ ಬಿ.ನರೋಣಾ, ನಂದಿನಿ, ಸೇವಕಿ ಸುರೇಖಾ ಸಣಮನಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.