ದಲಿತಕೇರಿಗಳಲ್ಲಿ ಅಸ್ಪೃಶ್ಯತಾ  ನಿವಾರಣಾ  ಸಭೆ  ಬೇಡ – ಎಸ್. ದುರುಗೇಶ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜೂ.24 :-  ಸರ್ಕಾರವು ಆಚರಿಸುವ  ಅಸ್ಪೃಶ್ಯತೆ ನಿವಾರಣಾ ಸಪ್ತಾಹದ  ಸಭೆಗಳನ್ನು ಹಾಗೂ ಪೊಲೀಸ್ ಇಲಾಖೆಗಳು ನಡೆಸುವ ದಲಿತರ ಸಭೆಗಳನ್ನು ದಲಿತಕೇರಿಗಳಲ್ಲಿ ಸಭೆ ನಡೆಸುವ ಬದಲಾಗಿ ಅಸ್ಪೃಶ್ಯತೆ ಮಾಡುವ ಸಮುದಾಯಕ್ಕೆ ಅರಿವು ಮೂಡಿಸಲು ಮುಂದಾಗುವ ಜೊತೆಗೆ ದಲಿತರು ಸಮಾಜಮುಖಿ ಜೀವನ ನಡೆಸಲು ಸರ್ಕಾರ ಹಾಗೂ ಇಲಾಖೆಗಳ ಅಧಿಕಾರಿಗಳು ಸಹಕಾರಿಯಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವಿಜಯನಗರ ಜಿಲ್ಲಾ ಸಂಚಾಲಕ ಎಸ್ ದುರುಗೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ದಲಿತರ ಕುಂದುಕೊರತೆಯಲ್ಲಿ ಭಾಗವಹಿಸಿ ಮಾತನಾಡುತ್ತ ದಲಿತರ ಮೇಲೆ ತೋರುವ ಅಸ್ಪೃಶ್ಯತೆ, ಹೋಟೆಲ್ ಗಳಲ್ಲಿ ಕೊಡುವ ಕಪ್ ಸಿಸ್ಟಮ್ ಗಳ ಹಾಗೂ ದಲಿತರ ವಿರುದ್ಧ ನಡೆಸುವ ಷಡ್ಯಂತ್ರಗಳ ಬಗ್ಗೆ  ಗುಪ್ತಮಾಹಿತಿ ನೀಡುವ ಮಾಹಿತಿದಾರರಿಗೆ ಪೊಲೀಸರು ರಕ್ಷಣೆ ನೀಡಬೇಕು ಎಂದು ದುರುಗೇಶ ತಿಳಿಸಿದರು.
ಪಪಂ ಸದಸ್ಯ ಹಾಗೂ ಎಸ್ಟಿ ಸಮುದಾಯದ ಮುಖಂಡ ಕಾವಲಿ ಶಿವಪ್ಪನಾಯಕ ಮಾತನಾಡಿ ಕೂಡ್ಲಿಗಿ ಭಾಗದಲ್ಲಿ ಹೆಚ್ಚಾಗಿ ಎಸ್ಸಿ /ಎಸ್ಟಿ ಸಮುದಾಯದ ಬಡ ರೈತಾಪಿ ಕುಟುಂಬಗಳೇ ಹೆಚ್ಚಾಗಿ ವಾಸವಾಗಿದ್ದು ಮಳೆಯಾಶ್ರಿತ ಪ್ರದೇಶದಲ್ಲಿ ರೈತರಿಗೆ ಬೇಕಾಗುವ ಬೀಜ ಗೊಬ್ಬರ ರೈತ ಸಾಮಗ್ರಿಗಳ ವಿತರಣೆ ಸಮರ್ಪಕವಾಗಿ ನೀಡಬೇಕಿದ್ದು ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಬೀಜ ಗೊಬ್ಬರ ಸಿಗದೇ ಪರದಾಡುತ್ತಿದ್ದಾರೆ ಆದರೆ ಗ್ರಾಮೀಣ ಭಾಗದ ಯಾರೋ ಉಳ್ಳವರ ಮನೆಯಲ್ಲಿ ಕಾಳಾಸಂತೆಯಲ್ಲಿ  ಸಿಗುವ ಬೀಜ ಗೊಬ್ಬರಗಳು ಖರೀದಿ ಮಾಡಲು ರೈತರು ಹೋಗಿ  ದುಪ್ಪಟ್ಟು ಬೆಲೆ ತೆರಬೇಕು ಈಗಾದರೆ ಎಸ್ಸಿ ಎಸ್ಟಿ ಸಮುದಾಯಕ್ಕೆ ಸರ್ಕಾರ ನೀಡುವ ಬೀಜ ಗೊಬ್ಬರ ಎಲ್ಲಿಗೆ ಹೋಯಿತು ಎನ್ನುವ ಪ್ರಶ್ನೆ ಉದ್ಭವವಾಗುತ್ತದೆ ಇದರ ಬಗ್ಗೆ ಗಮನ ಹರಿಸಿ ದಲಿತ ಸಮುದಾಯದ ರೈತರ ಬದುಕಿಗೆ ಆಸರೆಯಾಗಬೇಕು ಎಂದು ತಿಳಿಸಿದರು.
 ಸಿಪಿಐ ಮುಖಂಡ ಎಚ್.ವೀರಣ್ಣ ಮಾತನಾಡಿ, ಕೂಡ್ಲಿಗಿ ಪಟ್ಟಣದ ನಾನಾ ಕಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ, ಪಟ್ಟಣ ಸೇರಿ ಹಳ್ಳಿಗಳಲ್ಲಿ ಗಾಂಜಾ ಮಾರಾಟ ಮಾಡುವುದರಿಂದ ವಿದ್ಯಾರ್ಥಿಗಳು ದುಶ್ಚಟಕ್ಕೆ ದಾಸರಾಗುವ ಆತಂಕ ಪಾಲಕರಲ್ಲಿದೆ. ಹಾಗಾಗಿ, ಗಾಂಜಾ ಮಾರಾಟವನ್ನು ತಡೆಯಲು ಕ್ರಮಕೈಗಳ್ಳಬೇಕೆಂದು ಒತ್ತಾಯಿಸಿದರು.
ಸಿಪಿಐ ಸುರೇಶ್ ತಳವಾರ ಮಾತನಾಡಿ, ದಲಿತರ ಕುಂದು, ಕೊರತೆ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಸಲಹೆಗಳ ಕುರಿತು ಕ್ರಮಕೈಗೊಳ್ಳಲಾಗುವುದು. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು ಪಟ್ಟಣದಲ್ಲಿ ಜರುಗಿದ ಕಳ್ಳತನ ಪ್ರಕರಣವನ್ನು ಬೆನ್ನತ್ತಿ ಈಗಾಗಲೇ ಐದು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇನ್ನಷ್ಟು ಆರೋಪಿಗಳ ಪತ್ತೇಕಾರ್ಯ ನಡೆಸಲಾಗಿದ್ದು ಸದ್ಯದಲ್ಲೇ ಮತ್ತಷ್ಟು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಸುರೇಶ ತಳವಾರ ತಿಳಿಸಿದರು.
ಪಿಎಸ್‌ಐ ಧನಂಜಯ ಮಾತನಾಡಿ ಕೂಡ್ಲಿಗಿ ಪಟ್ಟಣದ ಮೂಲೆ ಮೂಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಆಸಕ್ತಿ ತೋರಿದ್ದು ಪಟ್ಟಣದಲ್ಲಿ ಜರುಗುವ ಅಪರಾಧ, ಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಪಟ್ಟಣದ ಜನತೆ ಹಾಗೂ ಪಟ್ಟಣ ಪಂಚಾಯತಿ ಸಿ ಸಿ ಕ್ಯಾಮರಾ ಅಳವಡಿಸಲು ಸಹಕಾರ ನೀಡಿದರೆ ಉತ್ತಮವಾಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದ್ದರಿಂದ ಸ್ಥಳೀಯ ಪಟ್ಟಣ ಪಂಚಾಯತಿವತಿಯಿಂದ 10ಲಕ್ಷ ರೂ ಅನುದಾನ ಸಿದ್ದವಾಗಿದೆ ಎಂದು  ಸಭೆಯಲ್ಲಿ ಭಾಗವಹಿಸಿದ್ದ  ಪ ಪಂ ಸದಸ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ್, ಅಜ್ಜಯ್ಯ, ನಾಗರಾಜ, ಕಂಪ್ಯೂಟರ್ ರಾಘವೇಂದ್ರ, ಶಿವಶಂಕರ್, ಎಸ್.ಸುರೇಶ್ ಹಾಗೂ ನಾನಾ ಹಳ್ಳಿಗಳ ದಲಿತ ಸಮುದಾಯಗಳ ಮುಖಂಡರು, ಪೊಲೀಸರು ಇದ್ದರು.