ತುಂಗಭದ್ರಾ ನದಿ ತೀರದಲ್ಲಿ ದೇವನಾಗರಿ ಶಿಲಾ ಶಾಸನ ಪತ್ತೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ 24: ತಾಲ್ಲೂಕಿನ ಹೊಸೂರು ಗ್ರಾಮದ ಬಳಿ ಹಾದು ಹೋಗಿರುವ ತುಂಗಭದ್ರಾ ನದಿಯಲ್ಲಿ ದೇವನಾಗರಿ ಲಿಪಿಯ ಶಿಲಾಶಾಸನ ಪತ್ತೆಯಾಗಿದೆ ಎಂದು ವನ್ಯಜೀವಿ ಸಂಶೋಧಕ ಡಾ.ಸಮದ್ ಕೊಟ್ಟೂರು ಗ್ರಾಮದ ನದಿ ಮಧ್ಯದ ನಡುಗಡ್ಡೆಯಲ್ಲಿ ಸಂಶೋಧನೆ ಮಾಡುವ ವೇಳೆಯಲ್ಲಿ ನದಿಯ ಬಂಡೆಯೊಂದರ ಮೇಲೆ ಈ ಶಾಸನ ಬೆಳಕಿಗೆ ಬಂದಿದೆ.
ಈ ನಡುಗಡ್ಡೆಯಲ್ಲಿ ಪುರಾತನ ದೇಗುಲಗಳಿದ್ದು, ಬಹುಶಃ ಇದೊಂದು ಜನವಸತಿ ಪ್ರದೇಶವಾಗಿದ್ದಿರಬಹುದು. ಹಾಗಾಗಿ ಇಲ್ಲಿ ಆಂಜಿನೇಯ ದೇವಸ್ಥಾನ, ಈಶ್ವರ ದೇವಸ್ಥಾನ ಮುಂತಾದ ದೇಗುಲಗಳಿವೆ. ಇವುಗಳಲ್ಲಿ ಆಂಜಿನೇಯ ದೇವಸ್ಥಾನ ಮತ್ತು ಈಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದು, ಉಳಿದ ದೇಗುಲಗಳು ಪಾಳು ಬಿದ್ದಿವೆ. ಈ ಪಾಳು ದೇಗುಲಗಳ ರಚನೆ ವಿನ್ಯಾಸವು ವಿಜಯನಗರ ಕಾಲದ ಸ್ಮಾರಕಗಳನ್ನು ಹೋಲುತ್ತವೆ.
ನದಿಯ ಮಧ್ಯೆ ಇರುವ ಆಂಜಿನೇಯ ಹಾಗೂ ಈಶ್ವರ ದೇವಸ್ಥಾನದ ಎದುರು  ಇರುವ ನದಿಯ ಪಕ್ಕದ ಬೃಹತ್ ಬಂಡೆಯ ಇಳಿಜಾರಿನ ಮೇಲೆ ಚೌಕಾಕಾರದಲ್ಲಿ ಈ ಶಾಸನವನ್ನು ಕೆತ್ತಲಾಗಿದೆ. 2 ಅಡಿ ಅಗಲ 3 ಅಡಿ ಉದ್ದವಿರುವ ಈ ಶಾಸನದಲ್ಲಿ 17 ಸಾಲುಗಳಿವೆ. ಮೇಲಿನ ಎಡಭಾಗದಲ್ಲಿ ಸೂರ್ಯ, ಮಧ್ಯೆ ಶಿವಲಿಂಗ ಬಲಕ್ಕೆ ಚಂದ್ರನ ಚಿತ್ರವಿದೆ. ಅನೇಕ ಶತಮಾನಗಳಿಂದ ನೀರಿನಲ್ಲಿ ಮುಳುಗಿದ್ದು, ಬಿಸಿಲು, ಮಳೆ, ಚಳಿ, ಗಾಳಿಗೆ ಮೈಯೊಡ್ಡಿರುವ ಕಾರಣ ಈ ಶಾಸನ ಕೆಲವು ಅಕ್ಷರಗಳು ಸವೆದು ಹೋಗಿವೆ. ಈ ಶಿಲಾ ಶಾಸನದ ಮೇಲೆಯೇ ಕಾಲುದಾರಿಯಿದ್ದು ಬೇಸಿಗೆಯಲ್ಲಿ ಹಾಗೂ ನದಿಯಲ್ಲಿ ನೀರು ಕಡಿಮೆಯಾದ ಸಂದರ್ಭದಲ್ಲಿ ನೂರಾರು ಜನರು ಇಲ್ಲಿನ ನದಿಯಲ್ಲಿ ಸ್ನಾನ ಮಾಡಲು ಬರುತ್ತಾರೆ. ಈ ಶಾಸನವನ್ನೇ ತುಳಿದುಕೊಂಡು ಹೋಗುತ್ತಾರೆ.
ಹಂಪಿ ಪ್ರದೇಶವು ವಿಜಯನಗರ ಸಾಮ್ರಾಜ್ಯಕ್ಕೂ ಅನೇಕ ಶತಮಾನಗಳ ಮೊದಲಿನಿಂದಲೂ ವಿವಿಧ ಸಂಸ್ಕೃತಿಗಳ ನೆಲೆಯಾಗಿದೆ. ಇಲ್ಲಿ ಕೊಪ್ಪಳದಲ್ಲಿ ಆಶೋಕನ ಶಿಲಾ ಶಾಸನವಿದೆ. ಅದೇ ರೀತಿ ಹಂಪಿಯ ನದಿಯುದ್ದಕ್ಕೂ ಇರುವ ಕಲ್ಲುಬಂಡೆಗಳ ಮೇಲೆ ಅನೇಕ ಶಾಸನಗಳಿವೆ. ಆದರೆ ಜನರ ಇಂತಹ ಶಾಸನಗಳಿಗೆ ಗಮನ ಕೊಡದೆ ನಾಶ ಮಾಡಿ ನಮ್ಮ ಇತಿಹಾಸದ ಪುಟಗಳನ್ನೇ ನಶಿಸಿಹಾಕುತ್ತಿದ್ದಾರೆ ಎಂದು ಡಾ.ಸಮದ್ ಕೊಟ್ಟೂರು ವಿಷಾದಿಸಿದರು.
ಇತ್ತೀಚಿಗೆ ಹುಲಿಗಿ ಆಣೆಕಟ್ಟಿನ ಬಳಿ 12 ಅಡಿ ಉದ್ದದ ಶಾಸನವನ್ನು ನದಿಯ ಮಧ್ಯೆ ಇರುವ ಬಂಡೆಯ ಮೇಲೆ ಪತ್ತೆ ಮಾಡಿ ಪುರಾತತ್ವ ಇಲಾಖೆಯ ಗಮನ ಸೆಳೆದಿದ್ದರು.
ಪ್ರಸ್ತುತ ಹೊಸೂರು ಶಿಲಾ ಶಾಸನವು ಅತ್ಯಂತ ಪುರಾತನ ಶಾಸನವಾಗಿದ್ದು ಇದರಿಂದ ಇಲ್ಲಿನ ಧಾರ್ಮಿಕ ಸಂಸ್ಕೃತಿ ಹಾಗೂ ಆಳ್ವಿಕೆಯ ಕುರಿತು ಬೆಳಕು ಚೆಲ್ಲವುದು ಎಂದು ಆಶಿಸಿ, ಸದರಿ ಶಾಸನದ ಅರ್ಥ ವಿವರಣೆ ನೀಡಿ ಅದನ್ನು ಸೂಕ್ತವಾಗಿ ಸಂರಕ್ಷಿಸಲು ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.