ಮಾದಿಗ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ: ಸಚಿವ ಮುನಿಯಪ್ಪ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ24: ಮಾದಿಗ ಸಮಾಜದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಲ ದಲಿತ ಸಮಾಜದ ಜನಾಂಗ ಸರ್ಕಾರದ ಸೌಲಭ್ಯದಿಂದ ವಂಚಿತವಾಗುತ್ತಿದೆ. ಪ್ರತಿಯೊಬ್ಬರು ಜಾಗೃತರಾಗಿ ಸಂಘಟಿತರಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಆಸ್ತಿಯನ್ನಾಗಿ ರೂಪಿಸಬೇಕಿದೆ ಎಂದರು.
ಮಾದಿಗ ಸಮಾಜದ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪೇಲಾದರೆ, ಮಕ್ಕಳನ್ನು ಶಾಲೆ ಬಿಡಿಸಿ, ಕೆಲಸ, ಕಾರ್ಯಗಳಿಗೆ ದೂಡಲಾಗುತ್ತಿದೆ. ಅವರು ಉನ್ನತ ಶಿಕ್ಷಣದತ್ತ ಬರುವುದು ಕಡಿಮೆಯಾಗುತ್ತಿದೆ. ಹೀಗಾಗದಂತೆ ಸಮಾಜದ ಬಾಂಧವರು, ಮಕ್ಕಳನ್ನು ಶುಶಿಕ್ಷಿತರನ್ನಾಗಿ ಮಾಡಲು ಶ್ರಮ ವಹಿಸಬೇಕು ಎಂದರು.
ಯುವ ಸಮೂಹ ಶ್ರಮಿಸಲಿ:
ಸಮಾಜವನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪುನರ್ ಸಂಘಟನೆ ಮಾಡುವ ಅವಶ್ಯಕತೆಯಿದ್ದು ಅಂಬೇಡ್ಕರ ಅವರ ತತ್ವ ಸಿದ್ಧಾಂತ ಹೋರಾಟದ ಮನೋಭಾವ ಅಳವಡಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮೂಹ ಸಮಾಜದ ಒಳಿತಿಗೆ ಶ್ರಮಿಸಬೇಕಿದೆ ಎಂದರು. ಪ್ರತಿ ಜಿಲ್ಲೆಯಲ್ಲಿ ಬಡ ಮಕ್ಕಳಿಗೆ ಪಿಯುಸಿ ವರೆಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಅವರು ಪ್ರಗತಿ ಸಾಧ್ಯವಾಗಲಿದೆ. ಆಗ ಮಾತ್ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಅರ್ಥ ಬರಲಿದೆ ಎಂದರು.
ಪಕ್ಷತೀತವಾಗಿ ಒಂದಾಗಿ:
ಯಾವುದೇ ರಾಜಕೀಯ ಪಕ್ಷಗಳು ಕೇವಲ ಚುನಾವಣೆಗೆ ಸೀಮಿತಗೊಂಡಿವೆ. ಸಮಾಜದ ಬೇಕು, ಬೇಡಿಕೆಗಳಿಗಾಗಿ ಒಗ್ಗಟ್ಟಾಗಬೇಕಿದೆ. ಪಕ್ಷತೀತವಾಗಿ ಒಂದಾಗಬೇಕಿದೆ. ಸಮಾಜಕ್ಕೆ ಬೇಕಿರುವ ಸಮಾನತೆಗೆ ಹೋರಾಟ ನಡೆಯಬೇಕು. ಮಾದಿಗ ಸಮಾಜ ಇನ್ನೂ ಹಿಂದುಳಿದಿದೆ ಎಂದು ಕೂಗು ಪಾರ್ಲಿಮೆಂಟ್‍ಗೆ ಕೇಳಿಸಬೇಕು ಎಂದರು.
ಶಾಸಕ ಎಚ್.ಆರ್.ಗವಿಯಪ್ಪ ಮಾತನಾಡಿ, ಅಂಬೇಡ್ಕರ್ ಅವರು ಎಲ್ಲರಿಗೂ ಸಮನವಾಗಿ ಬದುಕುವ ಹಕ್ಕು ನೀಡಿದರು. ಮಾದಿಗರ ಜನರ ಹಾಗೂ ಮಾತಂಗ ಮಠ ಅಭಿವೃದ್ಧಿಗಾಗಿ ಸಹಕರಿಸುವೆ ಎಂದು ಭರವಸೆ ನೀಡಿದರು.
ಮಾಜಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಮಾದಿಗ ಸಮಾಜದ ಒಳ ಮೀಸಲಾತಿಯನ್ನು ಜಾರಿ ಮಾಡಲಿದೆ. ಇದರಿಂದ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳವಾಗಲಿದೆ.  ಮೀಸಲಾತಿ ಹೆಚ್ಚಿನ ಲಾಭ ಪಡೆಯಲು ಸಮಾಜದ ಮಕ್ಕಳು ಶಿಕ್ಷಣವಂತರಾಗಬೇಕಿದೆ.
ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಜಿ, ಹಂಪಿ ಮಾತಂಗ ಪರ್ವತದ ಪೂರ್ಣಾನಂದ ಭಾರತಿ ಸ್ವಾಮಿಜಿ, ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ನಗರಸಭೆ ಅಧ್ಯಕ್ಷೆ ಎ.ಲತಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಇಮಾಮ್ ನಿಯಾಜಿ, ಪೌರಾಯುಕ್ತ ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ಜಗಜೀವನ್‍ರಾಮ್ ಚರ್ಮ ಕೈಗಾರಿಕ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎ.ಮಾನಯ್ಯ, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಾಣಿ ಸಂಯುಕ್ತ, ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಜೆ.ಎಸ್.ಮಂಜುನಾಥ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿರಾಜ್ ಶೇಖ್, ಬಿಜೆಪಿ ಮುಖಂಡರಾದ ಸಿದ್ಧಾರ್ಥ್ ಸಿಂಗ್, ದೀಪಕ್ ಕುಮಾರ್ ಸಿಂಗ್, ಎಂ.ಸಿ ವೀರಸ್ವಾಮಿ, ನಿಂಬಗಲ್ ರಾಮಕೃಷ್ಣ, ಬಿ.ಮಾರೆಣ್ಣ, ರಾಮಚಂದ್ರ, ಭರತ ಕುಮಾರ್, ಎಂ.ಬಸವರಾಜ,  ಹನುಮಂತಪ್ಪ, ಕರಿಯಯಪ್ಪ, ಹೆಚ್.ಶೇಷು, ಮಾರೆಶ್, ವಿಜಯಕುಮಾರ್, ಪಂಪಾಪತಿ, ವೀರೇಶ, ನೂರಾರು ಸಂಖ್ಯೆಯ ಕಾರ್ಯಕರ್ತರು  ಕಾರ್ಯಕ್ರಮದಲ್ಲಿ ಹಾಜರಿದ್ದರು. 400ಕ್ಕೂ ಹೆಚ್ಚು ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು.