ಪರಮಾತ್ಮನೊಂದಿಗೆ ಸಂಬಂಧ ಹೊಂದುವುದೇ ಯೋಗ
ಗುಳೇದಗುಡ್ಡ,ಜೂ.24: ಯೋಗ ಎಂದರೆ ಕೇವಲ ಆಸನವಲ್ಲ. ಅದು ಪರಿಪೂರ್ಣ ಯೋಗವಲ್ಲ. ಯಾವಾಗ ಮನಸ್ಸು, ದೇಹ, ಆತ್ಮ ಇವುಗಳ ಸಮ್ಮಿಲನದಿಂದಾಗಿ ಪರಮಾತ್ಮನ ಜೊತೆ ಸಂಬಂಧ ಹೊಂದುವುದೇ ಯೋಗ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಎಲ್ಲವನ್ನು ಒಳಗೊಳ್ಳುವುದೇ ಯೋಗ ಎಂದು ದೈಹಿಕ ಶಿಕ್ಷಕ ಸಂಗಮೇಶ ಉಳ್ಳಾಗಡ್ಡಿ ಹೇಳಿದರು.
ಅವರು ಸಮೀಪದ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹತ್ತನೇಯ ಅಂತರ್‍ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ಮನುಷ್ಯನ ದೇಹದ ಭಾಗಗಳು ಬಲಿಷ್ಠವಾಗಿ ಬೆಳೆಯುತ್ತವೆ. ಮನಸ್ಸಿನಲ್ಲಿ ಶಾಂತಿ ನೆಮ್ಮದಿ ನೀಡುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಯೋಗಾಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳು ದೈಹಿಕವಾಗಿ, ಮಾನಸಿಕವಾಗಿ ಬೆಳೆಯುತ್ತಾರೆ ಎಂದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಅಶೋಕ ಪೂಜಾರಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಹೇಳಿಕೊಟ್ಟರು. ಶಾಲೆಯ ಪ್ರಾಚಾರ್ಯ ಶಂಕರರಾವ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗುಳೇದಗುಡ್ಡ ಪಟ್ಟಣದ ದ್ರಾಕ್ಷಾಯಣಿ ವಡಿಗೇರಿ 74 ವರ್ಷದ ಅಜ್ಜಿ ಯೋಗಮಾಡಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿದರು.
ಈ ಸಂದರ್ಭದಲ್ಲಿ ಬಸವರಾಜ ಸಿಂದಗಿಮಠ, ನಿಂಗಪ್ಪ ಚೂರಿ, ರಮೇಶ ಕತ್ತಿಕೈ, ರಮೇಶ ಹಂಜಿ, ಬಸವರಾಜ ಚಿಕ್ಕಣ್ಣವರ, ಭಾಗ್ಯಲಕ್ಷ್ಮಿ ಟಿ.ಎಚ್. ಕೇಶವ್ ರಘುವೀರ, ಕಾವ್ಯಾ ಪಾಟೀಲ, ಕೀರ್ತಿ ಬಡಿಗೇರ, ಸೋಮಶೇಕರ ಗಡೇದಗೌಡ್ರ ಉಪಸ್ಥಿತರಿದ್ದರು.
ಯೋಗ ಕಾರ್ಯಕ್ರಮದಲ್ಲಿ ಎರಡೂ ಶಾಲೆಗಳ ಎಂಟನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.