ಶ್ರೀಧರಗಡ್ಡೆಯಲ್ಲಿ ಅಂಬೇಡ್ಕರ್  ಪ್ರೊ ಬಿ ಕೃಷ್ಣಪ್ಪ  ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.24: ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬಳ್ಳಾರಿ ತಾಲ್ಲೂಕು ಕಂಪ್ಲಿ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಶ್ರೀಧರಗಡ್ಡೆ ಗ್ರಾಮದಲ್ಲಿ  ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊ ಬಿ ಕೃಷ್ಣಪ್ಪ ರವರ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಡಾ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್ ಮಾತನಾಡಿ ಕರ್ನಾಟಕದಲ್ಲಿ ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯು ರಾಜ್ಯದಲ್ಲಿ ನಡೆಸಿದ ‘ಎಂಡ ಸರಾಯಿ ಬೇಡ ಹೋಬಳಿಗೊಂದು ವಸತಿ ಬೇಕು’ ಎಂಬ ಅಭಿಯಾನ ಮಾಡುವ ಮೂಲಕ ರಾಜ್ಯದಲ್ಲಿ ಇಂದು ಸಾವಿರಾರು ವಸತಿ ಶಾಲೆಗಳು ನಿರ್ಮಾಣ ಮಾಡಲು ಸಾಧ್ಯವಾಗಿದೆ. ಅಲ್ಲದೇ ದೇವದಾಸಿ ಪದ್ಧತಿ ನಿಷೇದ, ಭೂಮಿ ಹಕ್ಕುಗಳಿಗಾಗಿ ಕದಸಂಸ ಹಲವಾರು ಹೋರಾಟಗಳನ್ನು ಮಾಡಿಕೊಂಡು ಬಂದಿದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಕಂಪ್ಲಿ ಶಾಸಕರಾದ ಜೆ ಎನ್ ಗಣೇಶ್ ಮಾತನಾಡಿ ಇಂದು ಸಮಾಜದ ಎಲ್ಲಾ ವರ್ಗದ ಜನ ಶಿಕ್ಷಣವನ್ನು ಪಡೆಯುತ್ತೇವೆ, ಮತದಾನದ ಹಕ್ಕು ಪಡೆದಿದ್ದೇವೆ ಹಾಗೂ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿರುವುದು ಬಾಬಾಸಾಹೇಬ್ ಅಂಬೇಡ್ಕರ್ ರವರ ಸಂವಿಧಾನದಿಂದ ಸಾಧ್ಯವಾಗಿದೆ ಹಾಗೂ ಪ್ರೊ ಬಿ ಕೃಷ್ಣಪ್ಪ ರವರು ರಾಜ್ಯದಲ್ಲಿ ನಡೆಸಿದ ಹಲವಾರು ಸಾಮಾಜಿಕ ಹೋರಾಟಗಳ ಫಲದಿಂದಾಗಿ ಇಂದು ದಲಿತ ವರ್ಗಕ್ಕೆ ವಿಶೇಷ ಸೌಲಭ್ಯ ಸಿಗಲು ಸಹಾಯವಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕದಸಂಸ ಜಿಲ್ಲಾ ಸಂಚಾಲಕರಾದ ಜಿ ಗೋವರ್ಧನ, ಶ್ರೀಧರಗಡ್ಡೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಮುಖಂಡರು ಸೇರಿದಂತೆ ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ನಟರಾಜ, ಸಣ್ಣ ನಾಗರಾಜ, ಫೋಟೊರಾಜ ಹಾಗೂ ಯುವ ಮುಖಂಡರಾದ ಡಿ ವಿಜಯಕುಮಾರ್, ಅರುಣ್ ಕುಮಾರ್ ಮುಂಡ್ರಿಗಿ, ಸಿ ವಿಜಯ್, ಬಸವರಾಜ್, ನಾಗರಾಜ ಹೆಗಡೆ, ಪ್ರಹ್ಲಾದ್ ತೆಗ್ಗಿನಬೂದಿಹಾಳ್ ಮುಂತಾದವರು ಉಪಸ್ಥಿತರಿದ್ದರು.