ಪ್ರಥಮ ಬಳ್ಳಾರಿ ಜಿಲ್ಲಾ ಕಟ್ಟಡ ಕಾರ್ಮಿಕರ ಸಮ್ಮೇಳನ
ಸಂಜೆವಾಣಿ ವಾರ್ತೆ                                                                       
ಬಳ್ಳಾರಿ, ಜೂ.24: ಎಐಯುಟಿಯುಸಿಗೆ ಸಂಯೋಜನೆ ಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದಿಂದ   ಬಳ್ಳಾರಿ ಜಿಲ್ಲಾ ಪ್ರಥಮ ಸಮ್ಮೇಳನವನ್ನು ಜಿಲ್ಲಾಧಿಕಾರಿ ಕಛೇರಿಯ ಆವರಣದಲ್ಲಿರುವ  ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.       
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಉಪಾಧ್ಯಕ್ಷರಾದ  ಷಣ್ಮುಗಂ.ಪಿ.ಎಸ್ ಮಾತನಾಡುತ್ತಾ “ಕಟ್ಟಡ ಕಾರ್ಮಿಕರು ಕೇವಲ ಕಟ್ಟಡ ನಿರ್ಮಿಸುವವರಷ್ಟೇ ಅಲ್ಲದೆ ಸಮಾಜವನ್ನೇ ಕಟ್ಟುತ್ತಿರುವ ಶ್ರಮಜೀವಿಗಳು . ಇಂದಿನ ವೇಗದ ಯುಗದಲ್ಲಿ ಕೂಡ ಎಷ್ಟೇ ತಾಂತ್ರಿಕತೆ ಮುಂದುವರೆದಿದ್ದರೂ, ದೊಡ್ಡ ಕಾರ್ಖಾನೆಗಳು, ಫ್ಲೇ ಓವರ್, ಅಪಾರ್ಟಮೆಂಟ್‌ಗಳ ನಿರ್ಮಾಣ ಇನ್ನಿತರ ಅಗತ್ಯಗಳ ಕಾರ್ಯಗಳು ಕಟ್ಟಡ ಕಾರ್ಮಿಕರ ಭಾಗವಹಿಸುವಿಕೆ ಇಲ್ಲದೆ ಸಾಧ್ಯವಿಲ್ಲ. ಗೋಡೆ ನಿರ್ಮಿಸುವವರಷ್ಟೇ ಅಲ್ಲದೆ ಬುನಾದಿ ತೋಡುವವರು, ಎಲೆಕ್ಟಿಷಿಯನ್, ಪ್ಲಂಬರ್, ಪೇಂಟ್ ಹೊಡೆಯುವವರು, ವೆಲ್ಡಿಂಗ್ ಮಾಡುವವರು, ಟೈಲ್ಸ್ ಹಾಕುವವರು ಹೀಗೆ ಒಂದು ಕಟ್ಟಡ ನಿರ್ಮಿಸಲು ತೊಡಗುವ ಎಲ್ಲರೂ ಕಟ್ಟಡ ಕಾರ್ಮಿಕರೆಂದರ ಅಡಿಯಲ್ಲಿ ಬರುತ್ತಾರೆ. ಆದರೆ  ಹಗಲಿರುಳು ಕಷ್ಟಪಟ್ಟು ಇತರರಿಗಾಗಿ ಸುಂದರವಾದ ಕಟ್ಟಡ ನಿರ್ಮಿಸುವ ಇವರು, ಸ್ವತಃ ತಾವೇ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇವರ ಕೆಲಸ ನಿಶ್ಚಿತವಲ್ಲದ ಕಾರಣ, ಇಡೀ ಜೀವನವೆಲ್ಲ ಅಭದ್ರತೆಯಲ್ಲೇ ಕಳೆಯಬೇಕಾಗಿದೆ” ಎಂದರು.
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ  ಕಾರ್ಯದರ್ಶಿ ಎಂ.ದೇವದಾಸ್ ಮಾತನಾಡುತ್ತಾ “ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಒಂದೊಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಿರುವಾಗ, ಮಕ್ಕಳ ಶಿಕ್ಷಣ, ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆ, ಖಾಯಂ ನಿವಾಸಕ್ಕೆ ಹಣ ಹೊಂದಿಸುವುದು ಕನಸಿನ ಮಾತೇ ಸರಿ. ಈ ಹಿನ್ನಲೆಯಲ್ಲಿ ಅವರ ಜೀವನದ ಸಂಕಷ್ಟಗಳಿಗೆ ಒಂದಿಷ್ಟಾದರೂ ಪರಿಹಾರ ಒದಗಿಸುವ ಉದ್ದೇಶದಿಂದ ಎಐಯುಟಿಯುಸಿ ಸಂಘಟನೆ ಒಳಗೊಂಡು ಇನ್ನಿತರ ಕಾರ್ಮಿಕ ಸಂಘಟನೆಗಳು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಸ್ಥಾಪನೆಗೆ ಹೋರಾಟ ನಡೆಸಿದವು. ಹೋರಾಟದ ಫಲವಾಗಿ ಕಲ್ಯಾಣ ಮಂಡಳಿ ರಚನೆಯಾಗಿದ್ದರೂ, ಅವರಿಗೆ ದೊರೆಯಬೇಕಾದ  ಸೌಲಭ್ಯಗಳು ಮಾತ್ರ ಕನ್ನಡಿಯೊಳಗಿನ ಗಂಟಾಗಿದೆ. ೩ ವರ್ಷಗಳಿಂದ ಕಟ್ಟಡ ಕಾರ್ಮಿಕರ ಸ್ಕಾಲರ್‌ಷಿಪ್ ಹಣ ಬರದೆ, ಕಾರ್ಮಿಕರ ಮಕ್ಕಳ ಶಿಕ್ಷಣ ಅತಂತ್ರದಲ್ಲಿ. ಅದು ಅಲ್ಲದೆ ಮೊದಲು ಬರುತ್ತಿದ್ದ ಸ್ಕಾಲರ್‌ಷಿಪ್ ಹಣದಲ್ಲಿ ರಾಜ್ಯ ಕಾಂಗ್ರಸ್ ಸರ್ಕಾರ ಶೇ.೬೦ರಷ್ಟು ರಾಜ್ಯ ಕಡಿತಗೊಳಿಸಿದೆ. ಮದುವೆಗೆ ಹಣ, ಅನಾರೋಗ್ಯ-ಅಪಘಾತಕ್ಕೊಳಗಾದಾಗ, ೬೦ ವರ್ಷ ದಾಟಿದಾಗ ದೊರೆಯಬೇಕಾದ ಸೌಲಭ್ಯಗಳು ಇನ್ನಿತರ ಅನೇಕ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ದೊರೆಯದೆ, ಕಲ್ಯಾಣ ಮಂಡಳಿಯಿದ ನೀಡಿರುವ ಗುರುತಿನ ಚೀಟಿ (ಲೇಬರ್ ಕಾರ್ಡ್) ಉಪಯೋಗಕ್ಕೆ ಬರದಂತಾಗಿದೆ. ಕಲ್ಯಾಣ ಮಂಡಳಿಯಲ್ಲಿರುವ ಸಾವಿರಾರು ಕೋಟಿ ಹಣ, ಅನಾವಶ್ಯಕ ಯೋಜನೆಗಳಿಗೆ ಖರ್ಚು ಮಾಡಿ, ಪೋಲು ಮಾಡಲಾಗುತ್ತಿದೆ. ಭ್ರಷ್ಟಾಚಾರದಿಂದ ಕಾರ್ಮಿಕರಿಗೆ ಸೇರಬೇಕಾದ ಹಣ, ಇತರರ ಜೇಬು ಸೇರುತ್ತಿದೆ. ಬೋಗಸ್ ಕಾರ್ಡ್ ತಡೆಯುವ ನೆಪದಲ್ಲಿ, ಹೊಸ ಗುರುತಿನ ಚೀಟಿ ಮಾಡಿಸಲು ಅಥವಾ ನವೀಕರಿಸಲು ಸಂಕೀರ್ಣವಾದ ನಿಯಮಗಳನ್ನು ರೂಪಿಸಲಾಗಿದೆ. ಇದರಿಂದ ಅರ್ಹ ಕಟ್ಟಡ ಕಾರ್ಮಿಕರಿಗೂ ಗುರುತಿನ ಚೀಟಿ ಮಾಡಿಸಲು ಸಾಧ್ಯ ಆಗುತ್ತಿಲ್ಲ. ಒಟ್ಟಾರೆಯಾಗಿ ರಾಜ್ಯ ಕಾಂಗ್ರೆಸ್ ಹಾಗೂ ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ಕಟ್ಟಡ ಕಾರ್ಮಿಕರ ಬದುಕು ಮತ್ತಷ್ಟು ದುರ್ಭರಗೊಂಡಿದೆ” ಎಂದರು.
ವೇದಿಕೆಯಲ್ಲಿ  ಸೋಮಶೇಖರ ಗೌಡ, ಡಾ.ಪ್ರಮೋದ್, ಶಾಂತಾ, ಸುರೇಶ್, ಶರ್ಮಾಸ್, ಎಐಯುಟಿಯುಸಿ ಹ ಮುಖಂಡರು, ಕಟ್ಟಡ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.