ಬಾಪೂಜಿ ಬ್ಯಾಂಕಿನ ಪ್ರಧಾನ ಕಚೇರಿ ಉದ್ಘಾಟನೆ
ಬಾಗಲಕೋಟೆ, ಜೂ 24: ಉತ್ತರ ಕರ್ನಾಟಕ ಭಾಗದಲ್ಲಿ ಸಕ್ಕರೆ ಕಾರ್ಖಾನೆಗಳು ಗಟ್ಟಿಯಾಗಿ ನೆಲೆಯೂರಲು ಸಹಕಾರಿ ಬ್ಯಾಂಕ್‍ಗಳು ನೀಡಿದ ಕೊಡುಗೆಯೇ ಕಾರಣ. ಇದರಿಂದಾಗಿ ರೈತರು ಕಬ್ಬು ಬೆಳೆದು ಉತ್ತಮ ಆದಾಯ ಸಂಪಾದಿಸುವಂತಾಗಿದೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ನವನಗರದ ಸೆಕ್ಟರ್ ನಂ.25 ರಲ್ಲಿ ನಿರ್ಮಾಣಗೊಂಡಿರುವ ಮಾಜಿ ಸಚಿವ ಎಸ್.ಆರ್. ಪಾಟೀಲ ಅಧ್ಯಕ್ಷತೆಯ ಬಾಪೂಜಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲೂ ಬಾಗಲಕೋಟೆ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿವೆ. ಈ ಕಾರ್ಖಾನೆಗಳು ಸಾಲ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಅವಲಂಬಿಸಿದರೆ ಅಲ್ಲ ವಿಳಂಬವಾಗುವುದರ ಜೊತೆಗೆ ನೂರೆಂಟು ನಿಯಮಗಳನ್ನು ಹೇರುತ್ತಾರೆ. ಆದರೆ ಸಹಕಾರಿ ಬ್ಯಾಂಕ್‍ಗಳು ನಿಗದಿತ ಅವಧಿಯಲ್ಲಿ ಸರಳವಾಗಿ ಸಾಲ ನೀಡಿದ್ದರಿಂದ ಸಕ್ಕರೆ ಕಾರ್ಖಾನೆಗಳು ಗಟ್ಟಿಯಾಗಿ ನೆಲೆ ಕಂಡಿವೆ ಎಂದು ಹೇಳಿದರು.
ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಎಸ್.ಆರ್. ಪಾಟೀಲ್ ಅವರು ಮಾತನಾಡಿ, 2008 ರಲ್ಲಿ ಬ್ಯಾಂಕ್ ಆರಂಭಗೊಡಿತು. ಈಗ ರಾಜ್ಯದಲ್ಲಿ 61 ಶಾಖೆಗಳನ್ನು ಹೊಂದಿದ್ದು, ಬಹುರಾಜ್ಯ ಬ್ಯಾಂಕ್ ಆಗಿ ದೇಶಾದ್ಯಂತ 60 ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಪ್ರಸಕ್ತ ಸಾಲಿನಲ್ಲಿ 1500 ಕೋಟಿ ರೂ.ಗಳ ಠೇವಣಿ ಸಂಗ್ರಹಿಸುವ ಗುರಿಯಿದ್ದು, 1200 ಕೋಟಿ ರೂ.ಗಳ ಸಾಲ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ಭವಿಷ್ಯದಲ್ಲಿ ಬ್ಯಾಂಕ್‍ನಲ್ಲಿ 5 ಸಾವಿರ ಕೋಟಿ ರೂ.ಗಳ ಠೇವಣಿ ಸಂಗ್ರಹಿಸುವ ಗುರಿಯಿದೆ ಎಂದು ಹೇಳಿದರು.
ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಅಧ್ಯಕ್ಷ ಜಿ. ನಂಜನಗೌಡ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಎ.ಆರ್. ಪ್ರಸನ್ನಕುಮಾರ, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ. ಪಾಟೀಲ, ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ದೇವರಾಜ, ಬಾಪೂಜಿ ಬ್ಯಾಂಕ್ ಉಪಾಧ್ಯಕ್ಷ ಜಿ.ಎನ್. ಪಾಟೀಲ, ನಿರ್ದೇಶಕರಾದ ಎ.ಎಂ. ಶೆಟ್ಟರ, ಎಸ್.ಕೆ. ಯಡಹಳ್ಳಿ, ಎಸ್.ಆರ್. ಮೇಲ್ನಾಡ, ಎಂ.ಎಸ್. ಪಾಟೀಲ, ಎಸ್.ಎಸ್. ಪಾತ್ರೋಟ ಮತ್ತಿತರರು ಇದ್ದರು.