ಜಲಸಿರಿ ಯೋಜನೆಯಡಿ ವಿತರಣೆ ಮಾಡುತ್ತಿರುವ ಬಿಲ್ ರದ್ದು ಪಡಿಸಲು‌ಆಗ್ರಹ; ವಿಪಕ್ಷದ ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೪; ಜಲಸಿರಿ ಯೋಜನೆಯಡಿ ವಿತರಣೆ ಮಾಡುತ್ತಿರುವ ಬಿಲ್ ಗಳನ್ನು 48 ಗಂಟೆಯೊಳಗೆ ರದ್ದುಪಡಿಸಬೇಕು ಮತ್ತು ಸಾಮಾನ್ಯ ಸಭೆ ನಡೆಸಬೇಕು ಎಂದು ಒತ್ತಾಯಿಸಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.ಜಲಸಿರಿ ಯೋಜನೆಯ ಕಾಮಗಾರಿ ಪೂರ್ಣ ಗೊಂಡಿಲ್ಲ.‌ಯೋಜನೆಯಂತೆ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಒದಗಿಸುತ್ತಿಲ್ಲ. ಆದರೂ, ಸಾರ್ವಜನಕರಿಗೆ ಬಿಲ್ ನೀಡಲಾಗುತ್ತಿದೆ. ಸಾಮಾನ್ಯ ಸಭೆಯಲ್ಲಿ ಬಿಲ್ ನೀಡದಂತೆ ಚರ್ಚೆ ಸಹ ನಡೆಸಲಾಗಿದೆ. ಆದರೂ, ಅಧಿಕಾರಿಗಳು ಬಿಲ್ ವಿತರಣೆ ಮಾಡುತ್ತಿರುವುದು ಸರಿಯಾದ ಕ್ರಮ ಅಲ್ಲ. ಮುಂದಿನ 48 ಗಂಟೆಗೆ ಬಿಲ್ ನೀಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ದಾವಣಗೆರೆಯಲ್ಲಿ ಕುಡಿಯುವ ನೀರು, ಮಳೆಗಾಲದ ಹಿನ್ನೆಲೆಯಲ್ಲಿ ಸ್ವಚ್ಛತೆ ಇತರೆ ಬಹು ಮುಖ್ಯ ವಿಷಯಗಳ ಬಗ್ಗೆ ಚರ್ಚಿಸಲು ಕೂಡಲೇ ಸಾಮಾನ್ಯ ಸಭೆ ನಡೆಸಬೇಕು ಎಂದು ಮೇಯರ್, ಆಯುಕ್ತರು, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.‌ ಮೇಯರ್ ಅಧಿಕಾರವಧಿ ಮುಗಿದಿದೆ ಎಂಬ ಸಬೂಬು ಹೇಳಲಾಗುತ್ತದೆ. ಕರ್ನಾಟಕ ಪೌರ ಅಧಿನಿಯಮದ ಅಧ್ಯಾಯ ಮೂರರ ಪ್ರಕಾರ ಮುಂದಿನ ಮೇಯರ್ ಆಯ್ಕೆ ಆಗುವವರೆಗೆ ಹಾಲಿ ಮೇಯರ್ ಮುಂದುವರಿಯಬಹುದು ಮತ್ತು ಸಾಮಾನ್ಯ ಸಭೆ ನಡೆಸಬಹುದು.‌ ಮಂಗಳೂರಿನಲ್ಲಿ ಸಾಮಾನ್ಯ ಸಭೆ ನಡೆಸಿರುವ ಉದಾಹರಣೆ ಇದೆ. ಕೂಡಲೇ ಸಾಮಾನ್ಯ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.ಮಾಜಿ ಮೇಯರ್ ಎಸ್.ಟಿ. ವೀರೇಶ್, ಉಪ ಮೇಯರ್ ಯಶೋಧ ಎಗ್ಗಪ್ಪ, ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನ ಕುಮಾರ್, ಉಮಾ ಪ್ರಕಾಶ್, ಗಾಯಿತ್ರಿ ಖಂಡೋಜಿ ರಾವ್, ಕೆ.ಎಂ. ವೀರೇಶ್ ಇತರರು ಇದ್ದರು