ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುತ್ತಿದೆ: ವಿಜಯೇಂದ್ರ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.24:- ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪ್ರತಿ ನಿರ್ಧಾರದಲ್ಲೂ ಮೊಸರಲ್ಲಿ ಕಲ್ಲು ಹುಡುಕುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೊಸದಾಗಿ ಯಾವುದೇ ಕೈಗಾರಿಕೆ ಬರಲಿಲ್ಲ. ಈಗ ಸಂಡೂರಿನಲ್ಲಿ ಕೈಗಾರಿಕಾ ವಲಯ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದೇ ಒಂದು ಕೈಗಾರಿಕೆಯೂ ಬರಲಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗಾರಿಕೆ ಸ್ಥಾಪಿಸಲು ಹೊರಟಿದೆ.
ಅದಕ್ಕೂ ತಕರಾರು ಮಾಡುತ್ತಿದೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ಕುತರೇ ರಾಜ್ಯ ಅಭಿವೃದ್ಧಿ ಹೇಗೆ ಆಗುತ್ತದೆ ಹೇಳಿ ಎಂದು ಅವರು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾದ ಮೇಲೆ ಅದರ ಸೇಡು ತೀರಿಸಿಕೊಳ್ಳಲು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದೆ. ಸರ್ಕಾರ ಜನರ ಮೇಲೆ ಸೇಡಿನ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಕೂಡಲೇ ತೈಲ ಬೆಲೆ ಇಳಿಸಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದರೂ ಕೈ ಹಿಡಿಯಲಿಲ್ಲ ಎಂಬ ಸಿಟ್ಟು ಸರ್ಕಾರಕ್ಕಿದೆ. ಹೀಗಾಗಿ ಜನ ವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದರು.
ಹೈಕಮಾಂಡ್ ಜತೆ ಚರ್ಚೆ ಚನ್ನಪಟ್ಟಣ ಉಪ ಚುನಾವಣೆ ಸಂಬಂಧ ನಾಳಿದ್ದು ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸುತ್ತೇನೆ. ಚನ್ನಪಟ್ಟಣ ಸೀಟು ಬಿಟ್ಟು ಕೊಡುವ ಅಥವಾ ತೆಗೆದುಕೊಳ್ಳವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಮೊದಲ ಹಂತದ ಚರ್ಚೆಗಳು ಈ ವಿಚಾರದಲ್ಲಿ ಆಗಿಲ್ಲ. ಈ ಕುರಿತು ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಸೇರಿ ಚರ್ಚಿಸುತ್ತೇವೆ ಎಂದರು.
ಈ ಸಂಬಂಧ ಸಿ.ಪಿ. ಯೋಗೇಶ್ವರ್ ಅವರನ್ನು ಕರೆದು ಮಾತನಾಡುತ್ತೇನೆ. ಕಾಂಗ್ರೆಸ್ ನಿಂದ ಯಾರೇ ಸ್ಪರ್ಧಿಸಿದರೂ ಅದು ಅವರಿಗೆ ಬಿಟ್ಟದ್ದು. ಜನ ಮನಸ್ಸು ಮಾಡಿದರೇ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶವೇ ಸಾಕ್ಷಿ. ಯಾರು ಎಷ್ಟು ಬಾಲಾಢ್ಯರು ಎಂದುಕೊಂಡರು ಜನರ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ಕುರಿತು ಪ್ರತಿಕ್ರಿಯಿಸಲು ವಿಜಯೇಂದ್ರ ನಿರಾಕರಿಸಿದರು. ಆ ವಿಚಾರ ಬೇಡ ಬಿಡಿ ಎಂದರು.