ಚರ್ಚಿಸಿ ಸೂರಜ್ ರೇವಣ್ಣ ವಿರುದ್ಧ ಕ್ರಮ: ಜಿಟಿಡಿ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.24:- ಯುವಕನ ಮೇಲೆ ಲೈಗಿಂಕ ದೌರ್ಜನ್ಯ ಎಸಗಿರುವ ಆರೋಪದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಕ್ರಮ ಜರುಗಿಸುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಜೆಡಿಎಸ್ ಪ್ರಮುಖರ ಸಮಿತಿಯ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದರು.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಕರಣದ ಬಗ್ಗೆ ನನಗೆ ಮಾಹಿತಿ ಇಲ್ಲ. ಸೂರಜ್ ಅವರನ್ನು ಬಂಧಿಸಿರುವ ವಿಷಯವೂ ನಿಮ್ಮಿಂದಲೇ (ಮಾಧ್ಯಮದಿಂದ) ತಿಳಿಯಿತು. ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರದಲ್ಲೂ ನಮ್ಮ (ಪಕ್ಷದ) ಹಸ್ತಕ್ಷೇಪ ಇರಲಿಲ್ಲ. ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದರು.
ನಾನು ತಪ್ಪು ಮಾಡಿದವರ ಪರ ನಿಲ್ಲುವುದಿಲ್ಲ. ನನ್ನ ಮಗನೇ ಇರಲಿ, ನನ್ನ ಸಂಬಂಧಿಗಳೇ ಇರಲಿ. ಯಾರೇ ತಪ್ಪು ಮಾಡಿದರೂ ತಪ್ಪೇ. ಜಾತ್ಯತೀತ ಜನತಾದಳ ತಪ್ಪು ಮಾಡಿದವರ ಪರವಾಗಿ ಎಂದಿಗೂ ನಿಲ್ಲುವುದಿಲ್ಲ ಎಂದು ಹೇಳಿದರು.
ಸೂರಜ್ ರೇವಣ್ಣ ಬಂಧನದಿಂದ ಪಕ್ಷಕ್ಕೆ ಮುಜುಗರವೇಕೆ ಎಂದು ಕೇಳಿದ ಅವರು, ರಾಜ್ಯದಲ್ಲಿ ಯಾರೋ ಒಬ್ಬ ತಪ್ಪು ಮಾಡಿದರೇ ಅದಕ್ಕೆ ಆರೂವರೆ ಕೋಟಿ ಜನ ಕಾರಣವೇ? ಅಲ್ಲ ತಾನೇ, ಇದೂ ಹಾಗೆಯೇ ಎಂದು ಪ್ರತಿಕ್ರಿಯಿಸಿದರು.