ಚೂಡಾರತ್ನಮ್ಮಗೆ ಸ್ತ್ರೀ ರತ್ನ ಪ್ರಶಸ್ತಿ
ಸಂಜೆವಾಣಿ ನ್ಯೂಸ್
ಮೈಸೂರು, ಜೂ.24:- ಮೈಸೂರು ಪ್ರೆಸ್ ಕ್ಲಬ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆದ ಪ್ರೆಸ್‍ಕ್ಲಬ್‍ನ 17ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಧುನಿಕ ಶ್ರವಣಕುಮಾರ ಎಂದೇ ಖ್ಯಾತರಾಗಿರುವ ಕೃಷ್ಣಕುಮಾರ್ ಅವರ ತಾಯಿ ಚೂಡಾರತ್ನಮ್ಮ ಅವರಿಗೆ “ಸ್ತ್ರೀ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಹಲವು ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.
ತನ್ನ ಪುತ್ರನೊಂದಿಗೆ 23 ವರ್ಷದ ಹಳೆಯ ಬಜಾಜ್ ಚೇತನ್ ಸ್ಕೂಟರ್‍ನಲ್ಲಿ ಸಮಗ್ರ ಭಾರತ, ನೇಪಾಳ ಭೂತಾನ್ , ಮಯನ್ಮರ್ ದೇಶಗಳನ್ನು ಒಳಗೊಂಡಂತೆ 84,692 ಕಿಲೋ ಮೀಟರ್‍ಗಳ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿ ಮೈಸೂರಿಗೆ ಹಿಂತಿರುಗಿರುವ ಚೂಡಾರತ್ನಮ್ಮ ನವರಿಗೆ “ಸ್ತ್ರೀ ರತ್ನ “ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚೂಡಾರತ್ನಮ್ಮ ಅವರು, ತಂದೆ-ತಾಯಿಗಳು ಮಾತನಾಡುವ ಹಾಗೂ ನಮ್ಮೊಡನೆ ವಾಸಿಸುವ ದೇವರು. ವೃದ್ಧಾಪ್ಯದಲ್ಲಿ ತಂದೆ ತಾಯಿಗಳ ಸೇವೆ ಎಲ್ಲ ಮಕ್ಕಳ ಕರ್ತವ್ಯವಾಗಬೇಕು. ದಿನದ ಕೆಲಸ, ಸಮಯ, ವಯಸ್ಸಾದ ಜೀವಗಳೊಂದಿಗೆ ಪ್ರೀತಿಯಿಂದ ಕಳೆಯಬೇಕು. ತಾಯಿಯಾದವಳು ತನ್ನ ಜೀವನದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿ ತಾಯಿಯಾಗಿ ಪತ್ನಿಯಾಗಿ ಮಗಳಾಗಿ ಅತ್ತಿಗೆಯಾಗಿ ನಾದಿನಿಯಾಗಿ ಅತ್ತೆಯಾಗಿ ಹೀಗೆ ಹಲವಾರು ಪಾತ್ರಗಳನ್ನು ಏಕಕಾಲದಲ್ಲಿ ನಿಭಾಯಿಸಿ ಎಲ್ಲರಲ್ಲೂ ವಿಶ್ವಾಸ ಭಾವನೆ ಮೂಡಿಸುವ ಮೂಲಕ ಪೂಜ್ಯಳಾಗುತ್ತಾಳೆ.
ಇಂತಹ ಮಾತೆಯರಿಂದಲೇ ಭಾರತದಲ್ಲಿ ನೂರಾರು ಮಹಾಪುರುಷರು ಜನಿಸಿ ತಮ್ಮ ಛಾಪನ್ನು ಮೂಡಿಸಲು ಕಾರಣವಾಗಿದೆ ಎಂದರು.
ಇಂದು ನಾವೆಲ್ಲ ಸುಸ್ಥಿತಿಯಲ್ಲಿರಲು ತಂದೆ ತಾಯಿಗಳೇ ಪ್ರಥಮ ಕಾರಣರು. ತನ್ನ ಮಕ್ಕಳು ಸಮಾಜದಲ್ಲಿ ಗೌರವದಿಂದ ಬಾಳಬೇಕೆಂದು ಮಕ್ಕಳನ್ನು ತಿದ್ದಿ ತೀಡಿ ತಾನು ಉತ್ತಮವಾಗಿ ನಡೆದು ಸಂಸ್ಕಾರ ಸಂಸ್ಕೃತಿ ಕಲಿಸುತ್ತಾಳೆ. ಮಕ್ಕಳು ಒಂದು ಹಂತ ತಲುಪಿದಾಗ ಮನದಲ್ಲೇ ಹಿಗ್ಗಿ, ಹರಸುತ್ತಾಳೆ. ಹಾಗಾಗಿ ವೃದ್ಧಾಪ್ಯದಲ್ಲಿ ಎಲ್ಲಾ ಮಕ್ಕಳು ಭಾವನಾತ್ಮಕವಾಗಿ ಜತೆಯಾಗಿ ನಿಲ್ಲಲಿ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಿಯುಗ ಶ್ರವಣಕುಮಾರ ಖ್ಯಾತಿಯ ಕೃಷ್ಣಕುಮಾರ್ ಮತ್ತಿತರರು ಉಪಸ್ಥಿತರಿದ್ದರು.