ರಕ್ತದೊತ್ತಡ,ಡಯಾಬಿಟೀಸ್ ಬಗ್ಗೆ ನಿರ್ಲಕ್ಷ್ಯ ಬೇಡ
ಕೋಲಾರ,ಜೂ,೨೪- ಜನತೆ ಕಾಲಕಾಲಕ್ಕೆ ಡಯಾಬಿಟೀಸ್,ರಕ್ತದೊತ್ತಡದ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಈ ಸಮಸ್ಯೆಗಳ ಕುರಿತು ನಿರ್ಲಕ್ಷ್ಯ ವಹಿಸುವುದು ಬೇಡ ಎಂದು ಡಾ.ಬಿ.ಜಿ.ಮನೋಹರ್ ಗೌಡ ಸಲಹೆ ನೀಡಿದರು.
ಜಯನಗರ ೮ನೇ ಕ್ರಾಸ್‌ನಲ್ಲಿರುವ ಜನಪ್ರಿಯಾ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ನುರಿತ ವೈದ್ಯರ ತಂಡದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಹಲವಾರು ಮಂದಿಗೆ ಉಚಿತ ತಪಾಸಣೆ ನಡೆಸಿ ಅವರು ಮಾತನಾಡುತ್ತಿದ್ದರು.
ಡಯಾಬಿಟೀಸ್, ರಕ್ತದೊತ್ತಡದ ಕುರಿತು ಎಚ್ಚರವಹಿಸಿ, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಅದರಿಂದ ಯಾವುದೇ ಮಾರಣಾಂತಿಕ ಸಮಸ್ಯೆ ಎದುರಾಗದು ಎಂದ ಅವರು, ಜನತೆ ೩೫ ವರ್ಷಗಳ ನಂತರ ಕಡ್ಡಾಯವಾಗಿ ಪ್ರತಿ ಆರು ತಿಂಗಳಿಗೊಮ್ಮೆ ರಕ್ತ ಪರೀಕ್ಷೆಗೆ ಒಳಗಾಗುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದರು.
ಡಯಾಬಿಟೀಸ್ ಇಂದು ಸಾಮಾನ್ಯವಾಗಿದ್ದರೂ, ಅದಕ್ಕೆ ನಮ್ಮ ಆಹಾರಪದ್ದತಿಯೂ ಕಾರಣವಾಗಿದೆ ಎಂದ ಅವರು, ಜನತೆಗೆ ಈ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ, ಉಚಿತ ತಪಾಸಣೆಯ ಮೂಲಕ ರಕ್ತದೊತ್ತಡ, ಡಯಾಬಿಟೀಸ್ ಇದ್ದರೆ ನಾವೇ ಔಷಧಿ ನೀಡಿ ಮುಂಜಾಗ್ರತೆ ವಹಿಸಲು ಮಾರ್ಗದರ್ಶನ ನೀಡುತ್ತಿದ್ದು, ಇದರ ಸದುಪಯೋಗ ಪಡೆಯಲು ಮನವಿ ಮಾಡಿದರು.
ಜನತೆ ಅರಿವಿನಿ ಕೊರತೆಯಿಂದ ಡಯಾಬಿಟೀಸ್‌ಗೆ ತುತ್ತಾದರೆ ಔಷಧಿಗಳನ್ನು ತೆಗೆದುಕೊಳ್ಳದೇ ಕಿಡ್ನಿ ಸಮಸ್ಯೆ ಅನುಭವಿಸುವ ಪ್ರಕರಣಗಳು ಇವೆ, ಜತೆಗೆ ಕಣ್ಣಿನ ಪೊರೆ ಇಂದು ಸಾಮಾನ್ಯವಾಗಿದೆ, ಇದನ್ನು ತಡೆಯಲು ಮುಂಜಾಗ್ರತೆ ವಹಿಸಿ ಎಂದು ಕೋರಿದರು.
ವೈದ್ಯ ಡಾ.ಪ್ರವೀಣ್ ಮಾತನಾಡಿ, ಅನಕ್ಷರತೆ, ಅತಿಯಾದ ಆತ್ಮವಿಶ್ವಾಸ, ನಿರ್ಲಕ್ಷ್ಯದ ಮನೋಭಾವದಿಂದಾಗಿ ಅನೇಕರು ತಪಾಸಣೆಗೆ ಒಳಗಾಗುತ್ತಿಲ್ಲ, ಇದರ ಜತೆಗೆ ನಗರ ಪ್ರದೇಶದ ಅಕ್ಷರಸ್ಥರು ನಿರ್ಲಕ್ಷ್ಯ ಧೋರಣೆಯಿಂದಾಗಿ ಪರೀಕ್ಷೆಗೆ ಒಳಗಾಗುವುದಿಲ್ಲ ಎಂದು ತಿಳಿಸಿ, ತಮಗೆ ಇರುವ ಸಮಸ್ಯೆಗಳ ಕುರಿತು ಮೊದಲೇ ಅರಿತುಕೊಂಡರೆ ತಮ್ಮ ಆಹಾರ ಪದ್ದತಿ ಬದಲಿಸಿಕೊಂಡು ಮುಂದಾಗುವ ಹೆಚ್ಚಿನ ಹಾನಿಯಿಂದ ಪಾರಾಗಬಹುದು ಎಂದು ತಿಳಿಸಿದರು.
ಡಾ.ಚೇತನ್ ಮಾತನಾಡಿ, ಅನೇಕ ಜನತೆ ತಮ್ಮ ಕುಟುಂಬದಲ್ಲಿ ಹಿಂದೆ ಯಾರಿಗೂ ಸಕ್ಕರೆ ಕಾಯಿಲೆ ಬಾರದಿರುವಾಗ ನಮಗೂ ಬರುವುದಿಲ್ಲ ಎಂದೇ ನಂಬಿರುತ್ತಾರೆ, ಇಂತಹ ತಪ್ಪು ಕಲ್ಪನೆ ತಪ್ಪು ಎಂದ ಅವರು, ಹಿಂದೆ ಇದ್ದ ಆಹಾರಪದ್ದತಿ, ವ್ಯಾಯಾಮ, ಪರಿಶ್ರಮ ಇಂದು ಇಲ್ಲವಾಗಿದೆ, ಬದುಕಿನಲ್ಲಿ ಕಷ್ಟಕ್ಕೆ ಜಾಗವೇ ಇಲ್ಲದಂತೆ ಸುಲಭ ಹಾಗೂ ಸುಖಮಯ ಹಾದಿ ಕಂಡುಕೊಂಡಿದ್ದು, ಇದೆಲ್ಲವೂ ರೋಗಗಳಿಗೆ ಆಹ್ವಾನ ನೀಡುತ್ತಿದೆ, ಈ ಹಿನ್ನಲೆಯಲ್ಲಿ ನಿತ್ಯ ವ್ಯಾಯಾಮ, ಧ್ಯಾನ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಗಂಟಲು,ಕಿವಿ ತಜ್ಞರಾದ ಡಾ.ಉಜ್ವಲ ಅನೇಕರಿಗೆ ಅಂಟಲು ಕಿವಿಯ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ, ಅನೇಕರಿಗೆ ಅಲ್ಲೇ ಔಷಧಿ ವಿತರಿಸಿದರು.
ಶಿಬಿರದಲ್ಲಿ ವೈದ್ಯರಾದ ಡಾ. ಪ್ರಮೋದ್, ಫ್ರಾಂಕ್‌ಲೀನ್ ಮತ್ತಿತರರಿದ್ದು, ೧೦೦ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು.