ಅಲಂಕಾರಕ್ಕಿಟ್ಟ ಗಾಳಿ ತುಂಬುವ ಯಂತ್ರಗಳು
ಕೋಲಾರ,ಜೂ,೨೪-ದೇಶದ ಜನಜೀವನದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತಿತರ ತೈಲ ಕಂಪನಿಗಳು ಅತಿ ಪ್ರಮುಖ ಪಾತ್ರ ವಹಿಸಿವೆ ಆದರೆ ಇಂತಹ ಜನಸೇವೆಯ ಉದ್ದೇಶ ಹೊತ್ತಿರುವ ಸಂಸ್ಥೆಗಳ ಪರವಾನಗಿಯಡಿ ಆರಂಭಗೊಳ್ಳುವ ಪೆಟ್ರೋಲ್ ಬಂಕ್‌ಗಳು ಹಣಗಳಿಕೆಗೆ ಸೀಮಿತವಾಗಿ ಸಾರ್ವಜನಿಕರಿಗೆ ಹಾಗೂ ತನ್ನ ಗ್ರಾಹಕರಿಗೆ ನಿಯಮಾನುಸಾರ ಒದಗಿಸಬೇಕಾದ ಸೌಲಭ್ಯ ಒದಗಿಸುವಲ್ಲಿಯೂ ನಿರ್ಲಕ್ಷ್ಯ ತೋರುತ್ತಿವೆ.
ತೈಲ ಕಂಪನಿಗಳು ಇಂದು ನಮ್ಮ ಬದುಕಿನೊಂದಿಗೆ ಹಾಸುಹೊಕ್ಕಾಗಿವೆ, ಮನೆಯಲ್ಲಿ ಅಡುಗೆ ಅನಿಲ ನಿತ್ಯಬೇಕೇಬೇಕು ಹಾಗೆಯೇ ಹೊgಗಿನ ಸಂಚಾರಕ್ಕೆ ಹೋದರೆ ನಮ್ಮ ವಾಹನ ಮುಂದೆ ಸಾಗಲು ಪೆಟ್ರೋಲ್,ಡೀಸೆಲ್ ಇರಲೇ ಬೇಕು. ಅದರೆ ತೈಲಕಂಪನಿಗಳ ಜನಸೇವಾ ನಿಯಮಗಳ ಪಾಲನೆಯ ಕಟ್ಟುಪಾಡುಗಳೊಂದಿಗೆ ಆರಂಭಗೊಳ್ಳುವ ಹೆದ್ದಾರಿ ಅಕ್ಕಪಕ್ಕದ ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್,ಡೀಸೆಲ್ ಒದಗಿಸುವುದರ ಜತೆಗೆ ಬಂಕ್‌ಗೆ ಬರುವ ನಾಗರೀಕರಿಗೆ ಶೌಚಾಲಯ, ಕುಡಿಯುವ ನೀರು, ವಾಹನ ಚಕ್ರಗಳಿಗೆ ಉಚಿತ ಗಾಳಿ ಒದಗಿಸುವುದು ಕಡ್ಡಾಯವಾಗಿದೆ.
ಆದರೆ ಇದೆಲ್ಲವನ್ನು ಮರೆತು ಕೇವಲ ಹಣ ಗಳಿಕೆಗೆ ಸೀಮಿತವಾಗಿರುವ ಪೆಟ್ರೊಲ್ ಬಂಕ್‌ಗಳ ಜನವಿರೋಧಿ ಧೋರಣೆಯನ್ನು ಮಟ್ಟ ಹಾಕುವ ಹಾಗೂ ಪರವಾನಗಿ ರದ್ದುಗೊಳಿಸುವ ಅಧಿಕಾರ ತೈಲ ಕಂಪನಿಗಳು ಮತ್ತು ಸರ್ಕಾರಕ್ಕೆ ಇದೆ.
ಬಂಕ್ ಸ್ಥಾಪನೆಗೆ ನಿಯಮಗಳು-
ಪೆಟ್ರೋಲ್ ಬಂಕ್ ಸ್ಥಾಪಿಸಲು ಅನುಮತಿ ನೀಡುವಾಗಲೇ ತೈಲ ತುಂಬಿಸಿಕೊಳ್ಳಲು ಬರುವ ಸಾರ್ವಜನಿಕರಿಗೆ ಒಂದಿಷ್ಟು ಉಚಿತ ಸೌಲಭ್ಯ ಒದಗಿಸಬೇಕು ಎಂಬ ಕಟ್ಟುಪಾಡುಗಳು,ನಿಯಮಗಳಿಗೆ ಒಪ್ಪಿ ಎಲ್ಲವನ್ನು ಒದಗಿಸಿದ ನಂತರವೇ ಬಂಕ್ ಸ್ಥಾಪನೆಗೆ ಅನುಮತಿ ನೀಡಲಾಗುತ್ತದೆ.
ಕೋಲಾರದಿಂದ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ನಗರದ ಟೇಕಲ್ ರಸ್ತೆ ಅಂಡರ್ ಪಾಸ್‌ಬಳಿಯಿಂದಲೇ ಆರಂಭಗೊಳ್ಳುವ ಪೆಟ್ರೋಲ್ ಬಂಕ್‌ಗಳು ದಾರಿಯುದ್ದಕ್ಕೂ ಹೊಸಕೋಟೆವರೆಗೂ ಹತ್ತಾರು ಸಂಖ್ಯೆಯಲ್ಲಿ ತಲೆಯೆತ್ತಿವೆ.
ಕಾರು,ದ್ವಿಚಕ್ರ ವಾಹನಗಳ ಸವಾರರು ತಮ್ಮ ವಾಹನಗಳಿಗೆ ಪೆಟ್ರೋಲ್,ಡೀಸೆಲ್, ಗಾಳಿ ತುಂಬಿಸಿಕೊಳ್ಳಲು ದಾರಿಯುದ್ದಕ್ಕೂ ಇರುವ ಯಾವುದೇ ಪೆಟ್ರೋಲ್ ಬಂಕ್‌ಗೆ ಹೋದರೂ ತೈಲ ಹಾಕಲು ಸಿದ್ದ ಆದರೆ ಗಾಳಿ ತುಂಬಲು ಮಾತ್ರ ಸಿದ್ದರಿಲ್ಲ, ಅವರ ಬಳಿ ಗಾಳಿ ತುಂಬುವ ಯಂತ್ರ ಕೆಟ್ಟಿದೆ ಎಂಬ ಸಿದ್ದ ಉತ್ತರ ಸಿಗುತ್ತದೆ.
ಪೆಟ್ರೋಲ್ ಬಂಕ್ ಅನುಮತಿ ಪಡೆಯಲು ಅಲಂಕಾರಕ್ಕೆಂಬಂತೆ ಬಂಕ್ ಬಳಿ ಹಾಕಿರುವ ಈ ಗಾಳಿ ತುಂಬುವ ಯಂತ್ರಗಳನ್ನು ನಂಬಿ ಅನೇಕ ವಾಹನ ಚಾಲಕರು ಸಾವಿರಾರು ರೂಗೆ ಪೆಟ್ರೋಲ್ ಹಾಕಿಸಿಕೊಂಡು ಚಕ್ರಗಳಿಗೆ ಗಾಳಿ ತುಂಬಿಸಿ ಎಂದರೆ ಅಲ್ಲಿನ ಸಿಬ್ಬಂದಿ ನೀಡುವ ಹೊಣೆಗೇಡಿ ಉತ್ತರ ಕೇಳಿದರೆ ಗ್ರಾಹಕರ ರಕ್ತದೊತ್ತಡ ಹೆಚ್ಚಾಗದಿರದು.
ಹೊಸಕೋಟೆವರೆಗೂ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ, ನಯಾರಾ ಮತ್ತಿತರ ಬಂಕ್‌ಗಳು ಕಾಣ ಸಿಗುತ್ತವೆ, ಎಲ್ಲಿಯೂ ಚಕ್ರಗಳಿಗೆ ಗಾಳಿ ತುಂಬಿಸುವುದಿಲ್ಲ, ಚಾಲಕರು ಬೇಸರದಿಂದಲೇ ಮುಂದೆ ಸಾಗಬೇಕಾಗಿದೆ.