ಬಂಡಿದಾರಿ ಒತ್ತುವರಿ ತೆರವು ತಾಲ್ಲೂಕು ಆಡಳಿತ ವಿಫಲ
ಕೋಲಾರ, ಜೂ,೨೪- ಕೆ.ಜಿ.ಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಲಿಯ , ಸರ್ವರೆಡ್ಡಿಹಳ್ಳಿ ಸ.ನಂ. ೪೬ ರಲ್ಲಿ ಒತ್ತುವರಿಯಾಗಿರುವ ೮ ಅಡಿ ಬಂಡಿ ದಾರಿಯನ್ನು ಕಾನೂನಿನ ಪ್ರಕಾರ ತೆರವುಗೊಳಿಸುತ್ತೇವೆಂದು ಕೊಟ್ಟ ಮಾತನ್ನು ಉಳಿಸಿಕೊಳ್ಳದ ತಾಲ್ಲೂಕು ಆಡಳಿತದ ರೈತ ವಿರೋದಿ ದೋರಣೆಯನ್ನು ಖಂಡಿಸಿ ಜುಲೈ ೨ ರಿಂದ ಜಾನುವಾರುಗಳು ಮತ್ತು ನಷ್ಟ ಬೆಳೆ ಸಮೇತ ಒತ್ತುವರಿ ಜಾಗದಲ್ಲಿ ಹೋರಾಟ ಮಾಡುವುದಾಗಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ. ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ತಾಲ್ಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಸುದ್ದಿ ಘೋಷ್ಠಿ ನಡೆಸಿ ಅವರು ಮಾತನಾಡಿ ತಾಲ್ಲೂಕು ದಂಡಾಧಿಕಾರಿಗಳು ಕಂದಾಯ ಸರ್ವೆ ಪೊಲೀಸ್ ಇಲಾಖೆ, ಒತ್ತುವರಿ ಜಾಗಕ್ಕೆ ಬೇಟಿ ನಿಡಿ ಸಮಸ್ಯೆಯನ್ನು ಬಗೆ ಹರಿಸುತ್ತೇವೆಂದು ಭರವಸೆ ನೀಡಿ, ವರ್ಷ ಕಳೆದರೂ ಇದುವರೆವಿಗೂ ಕನಿಷ್ಠ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ವಿಫಲವಾಗಿರುವ ತಾಲ್ಲೂಕು ಆಡಳಿತದ ರೈತ ವಿರೋಧಿ ದೋರಣೆಯ ಜೊತೆಗೆ ಸರ್ಕಾರದ ಬಂಡಿ ದಾರಿ ತೆರವು ಆದೇಶವನ್ನು ಉಲ್ಲಂಘನೆ ಮಾಡಿ ಒತ್ತುವರಿದಾರರ ಜೊತೆ ಶಾಮೀಲಾಗಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಮುಖಾಂತರ ಅಧಿಕಾರಿಗಳಿಗೆ ಬಂಡಿ ದಾರಿಯನ್ನು ರೈತರೇ ತೆರವುಗೊಳಿಸುವ ನಿರ್ದಾರವನ್ನು ಕೈಗೊಳ್ಳುತ್ತೇವೆ ಆಗ ಆಗುವ ಕಾನೂನು ಅವ್ಯವಸ್ಥೆಗೆ ರೈತ ವಿರೋದಿ ದೋರಣೆಯೇ ಕಾರಣರಾಗುತ್ತಾದೆ ಎಂದು ಅಧಿಕಾರಿಗಳ ವಿರುದ್ದ ಕಿಡಿ ಕಾರಿದರು.
ಅಧಿಕಾರಿಗಳು ಸಹ ರೈತರ ಸಮಸ್ಯೆಗಳಿಗೆ ಸ್ಪಂಧಿಸಬೇಕಾದ ಜವಾಬ್ದಾರಿಯು ಇದೆ. ೧೦ ವರ್ಷಗಳಿಂದ ಹತ್ತಾರು ರೈತರು ಸ.ನಂ. ೪೬ ರ ಮಾಲೀಕರು ಒತ್ತುವರಿ ಮಾಡಿಕೊಂಡು, ೮ ಅಡಿ ಬಂಡಿ ರಸ್ತೆ ಇಲ್ಲದೆ, ಕಷ್ಟಾಪಟ್ಟು ಬೆಳೆದಂತಹ ಬೆಳೆ ಮರದಲ್ಲಿಯೇ ಉದುರುವ ಜೊತೆಗೆ ಹಸು ಕರುಗಳನ್ನು ಹೊರಗಡೆ ತರುವಂತಿಲ್ಲ. ಜಮೀನಿಗೆ ಹೋಗುವಂತಿಲ್ಲ. ನಮ್ಮ ಪರಿಸ್ಥಿತಿ ಕೇಳುವ ಅಧಿಕಾರಿಗಳು ಇದ್ದು ಇಲ್ಲದಂತಾಗಿದ್ದಾರೆಂದು ಆಕ್ರೋಷ ವ್ಯಕ್ತಪಡಿಸಿದರು.
ನೊಂದ ರೈತರಾದ ಕುಮಾರ್ ಹಾಗೂ ಕೃಷ್ಣಾರೆಡ್ಡಿ ಮಾತನಾಡಿ ಮಾವಿಗೆ ಉತ್ತಮ ಬೆಲೆ ಇದ್ದರೂ ರಸ್ತೆ ಇಲ್ಲದ ಕಾರಣ ತೋಟದಲ್ಲಿಯೇ ಉದುರಿ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದರು ರೈತರ ಕಣ್ಣೀರು ಅಧಿಕಾರಿಗಳಿಗೆ ತಮಾಷೆಯ ವಿಚಾರವಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ರೈತರು ಬರಗಾಲದಲ್ಲಿ ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಾಣಿಕೆ ಮಾಡಲು ರಸ್ತೆ ಇಲ್ಲದೆ ಕಣ್ಣು ಮುಂದೆಯೇ ಬೆಳೆ ನಷ್ಟವಾದರೆ ರೈತ ಪರ ನಿಲ್ಲಬೇಕಾದ ಅಧಿಕಾರಿಗಳು ಲಕ್ಷ ಲಕ್ಷ ಲಂಚ ಪಡೆದು ಒತ್ತುವರಿದಾರರ ಪರವಾಗಿ ನಿಲ್ಲುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಮರಗಲ್ ಶ್ರೀನಿವಾಸ್ ರಾಮಸಾಗರ ವೇಣು, ಸುರೇಶ್‌ಬಾಬು, ಸುಪ್ರಿಂ ಚಲ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಪ್ರಭಾಕರ್, ಕೇಶವ, ನವೀನ್ ರಾಮಚಂದ್ರರೆಡ್ಡಿ, ಹೇಮಾರೆಡ್ಡಿ, ಸುರೇಶ್, ಯಲ್ಲಣ್ಣ, ಹರೀಶ್, ಹನುಮಯ್ಯ, ಆನಂದ್‌ರೆಡ್ಡಿ ಮುಂತಾದ ರೈತರು ಭಾಗವಹಿಸಿದರು.