ಹುಣ್ಣಿಮೆ ಹಾಡು ೨೦೬ ರಲ್ಲಿ ಎರಡು ನಾಟಕ ಪ್ರದರ್ಶನ
ಕೋಲಾರ,ಜೂ,೨೪:ಸ್ಥಳೀಯ ನೆಲದ ಸಂಸ್ಕೃತಿ ಹಾಗೂ ಜನಪದಕ್ಕೆ ಪ್ರೋತ್ಸಾಹ ನೀಡುತ್ತಿರುವ ಆದಿಮ ಸಾಂಸ್ಕೃತಿಕ ಕೇಂದ್ರದ ಪರಿಸರದಲ್ಲಿ ಈ ವರ್ಷದಿಂದ ಡ್ರಾಮಾ ಡಿಪ್ಲೊಮೋ ಆರಂಭವಾಗುತ್ತಿರುವುದು ಒಳ್ಳೆಯ ಕೆಲಸ ಎಂದು ನೇತ್ರ ಜಂಟಿ ನಿರ್ದೇಶಕ ಡಾ.ಜೆ.ಶಾಮಸುಂದರ್ ಹೇಳಿದರು.
ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ೨೦೬ ನೇ ಹುಣ್ಣಿಮೆ ಹಾಡು ಪ್ರಯುಕ್ತ ಹಮ್ಮಿಕೊಂಡಿದ್ದ ಮಕ್ಕಳ ನಾಟಕೋತ್ಸವದ ಎರಡು ನಾಟಕಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನಪದ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಕಲೆಗಳ ಉಳಿವಿಗೆ ಶ್ರಮಿಸುತ್ತಿರುವ ಆದಿಮದಂತ ಸಂಸ್ಥೆಗಳನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕು. ಅದು ನಮ್ಮೆ ಲ್ಲರ ಜವಾಬ್ಧಾರಿಯಾಗಿದೆ ಎಂದರು.
ಬೆಸ್ಕಾಂ ಕಿರಿಯ ಇಂಜಿನಿಯರ್ ಸಮುದಾಯ ಕಾರ್ಯದರ್ಶಿ ವಿ.ಎನ್.ಸುಬ್ರಮಣಿ ಮಾತನಾಡಿ, ಆದಿಮ ಬೆಳವಣಿಗೆ ಗಮನಿಸಿದಾಗ ಮನುಷ್ಯತ್ವದ ನೆಲೆ, ಹಂಚಿತಿನ್ನುವ, ಕೂಡಿಬಾಳುವ ನೆಲ ಸಂಸ್ಕೃತಿಯ ಪ್ರತೀಕವಾಗಿದೆ. ಕಲ್ಲು ಮುಳ್ಳುಗಳಿದ್ದ ಈ ಜಾಗದಲ್ಲಿ ಆದಿಮ ಕನಸು ಕಟ್ಟಿಕೊಂಡು ಸಾಕಾರಗೊಳಿಸಿದ ಎಲ್ಲ ಹಿರಿಯರಿಗೂ ನನ್ನ ಕೃತಜ್ಞತೆಗಳು, ವಿಶೇಷವಾಗಿ ಕೆ.ಇ.ಬಿ. ನೌಕರರ ಮಕ್ಕಳು ಅಭಿನಯಿಸುತ್ತಿರುವ ನಾಟಕಕ್ಕೆ ಅವಕಾಶ ಕಲ್ಪಿಸಿಕೊಟ್ಟ ಆದಿಮಕ್ಕೆ ಅಭಿನಂದನೆಗಳು ಎಂದರು.
ಬಂಗಾರಪೇಟೆ ತಾಲೂಕಿನ ಕಾರಮಾನಹಳ್ಳಿ ಗರಿಕೆ ಸಂಸ್ಥೆಯ ಸಂಸ್ಥಾಪಕ, ರಂಗಕಲಾವಿದ ಕಿರಣ್ ಮಾತನಾಡಿ, ಆದಿಮ ಈ ಭಾಗದ ಬಹು ದೊಡ್ಡ ಸ್ಪೂರ್ತಿಯ ಸೆಲೆ. ಏಕೆಂದರೆ ಗರಿಕೆ ಸಂಸ್ಥೆ ಕಟ್ಟುವುದಕ್ಕೂ ಆದಿಮ ಕೇಂದ್ರವೇ ಪ್ರೇರಣೆ. ರಂಗಭೂಮಿ ಮುಖೇನ ಶಿಕ್ಷಣ ಎನ್ನುದರಲ್ಲಿ ನಂಬಿಕೆಯಿಟ್ಟವನಾಗಿ ೨೦೧೫ ರಿಂದ ಗರಿಕೆ ಸಾಂಸ್ಕೃತಿಕ ಕೇಂದ್ರ ಕಟ್ಟಿ ಆ ಮೂಲಕ ಮಕ್ಕಳ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಗರಿಕೆ ತಂಡದ ಮಕ್ಕಳು ಇಂದು ಇಲ್ಲಿ ನಾಟಕ ಪ್ರದರ್ಶನ ನೀಡಲಿದ್ದಾರೆ ಎಂದರು.
ವೇದಿಕೆಯಲ್ಲಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ವೆಂಕಟಮ್ಮ ನಾರಾಯಣಪ್ಪ, ನಿರ್ದೇಶಕ ಶೃಂಗಾರ್, ಮಂಜು ಗರಿಕೆ ಇದ್ದರು. ಅಗ್ರಹಾರ ರಮೇಶ್ ನಿರೂಪಿಸಿದರು, ತುರಂಡಹಳ್ಳಿ ಶ್ರೀನಿವಾಸ್ ಸ್ವಾಗತಿಸಿ, ನಾವೆಂಕಿಕೋಲಾರ ವಂದಿಸಿದರು. ಡಿ.ಆರ್.ರಾಜಪ್ಪ ಹಾಗೂ ತಂಡ ಆದಿಮ ಆಶಯ ಗೀತೆ ಹಾಡಿದರು, ಕೊಲದೇವಿ ನಾರಾಯಣಸ್ವಾಮಿ ಕೋಲಾಟ ಪದಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕಲಾವಿದರು, ಕಲಾಭಿಮಾನಿಗಳು ಭಾಗವಹಿಸಿದ್ದರು.
ಎರಡು ನಾಟಕ ಪ್ರದರ್ಶನ
ನಾಡಿನ ಹೆಸರಾಂತ ನಾಟಕಕಾರ, ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಕೋಲಾರದ ಕೆ.ಇ.ಬಿ ನೌಕರರ ಮಕ್ಕಳಿಗೆ ರಚಿಸಿಕೊಟ್ಟಿರುವ ‘ಕುಸ್ ಕುಸ್ ದಿಲ್ ಕುಶ್ ಹಾಗೂ ಬಂಗಾರಪೇಟೆ ತಾಲೂಕಿನ ಕಾರಮಾನಹಳ್ಳಿ ಗರಿಕೆ ಸಂಸ್ಥೆಯ ಮಕ್ಕಳು ಅಭಿನಯಿಸಿದ ನಾಟಕ ‘ಗಾದೆ ಗುರ್ರಕ್ಕ’ ಪ್ರದರ್ಶನಗೊಂಡಿತು.
ನೂರಾರು ಮಂದಿ ಕಲಾಭಿಮಾನಿಗಳು ಹುಣ್ಣಿಮೆ ರಾತ್ರಿಯಲ್ಲಿ ನಾಟಕಗಳನ್ನು ವೀಕ್ಷಿಸಿ ಮಕ್ಕಳ ಅಭಿನಯಕ್ಕೆ ತಲೆದೂಗಿದರು.