ಆನಾರೋಗ್ಯಪೀಡಿತ ದರ್ಶನ್ ತೋಟದ ಕೂಲಿ ಆಳಿಗೆ ಸಮಾಜ ಸೇವಕ ಡಾ. ಪರಮೇಶ್ವರಪ್ಪ ನೆರವು
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ.24-ಚಲನಚಿತ್ರ ನಟ ದರ್ಶನ್ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹೇಶ್‍ಗೆ ಎತ್ತು ದಾಳಿ ಮಾಡಿ, ಕಣ್ಣು ಹಾಗೂ ಮುಖಕ್ಕೆ ತಿವಿದು ತೀವ್ರ ಗಾಯವಾಗಿದ್ದು, ಸರಿಯಾಗಿ ಚಿಕಿತ್ಸೆ ದೊರೆಯದೇ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಗಾಯಾಳು ಮಹೇಶ್ ಮನೆಗೆ ಸಮಾಜ ಸೇವಕ ಡಾ. ಪರಮೇಶ್ವರಪ್ಪ ಭೇಟಿ ನೀಡಿ, ಸಹಾಯ ಹಸ್ತ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಮಾಧ್ಯಮಗಳಲ್ಲಿ ಈ ವಿಚಾರ ಪ್ರಚಾರವಾಗುತ್ತಿದ್ದಂತೆ ಸಮಾಜ ಸೇವಕರಾದ ಡಾ. ಪರಮೇಶ್ವರಪ್ಪ, ಜಿಲ್ಲಾ ರೈತ ಹಿತರಕ್ಷಣಾ ಹೋರಾಟಗಾರ ಸಮಿತಿಯ ಅಧ್ಯಕ್ಷ ಆಲೂರು ಮಲ್ಲು ಮತ್ತೋರ್ವ ಸಮಾಜ ಸೇವಕ ಸುರೇಶಗೌಡ ಅವರು ತಾಲೂಕಿನ ನಿಜಲಿಂಗನಪುರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸುವ ಜೊತೆಗೆ 25 ಕೆಜಿ ಅಕ್ಕಿ, ಹೊದಿಗೆ, ಬೆಟ್‍ಸೀಟ್ ಹಾಗು ನಗದು ಸಹಾಯ ಮಾಡಿದರು.
ಈ ವೇಳೆ ಮಾತನಾಡಿದ ಡಾ|| ಪರಮೇಶ್ವರಪ್ಪ ಅವರು, ಕಡು ಬಡವರಾದ ಉಪ್ಪಾರ ಸಮುದಾಯದ ಮಹೇಶ್ ಪತ್ನಿ ಹಾಗು ಚಿಕ್ಕಮಕ್ಕಳು ಇದ್ದಾರೆ. ತಾಯಿ, ಮತ್ತು ಪತ್ನಿಯ ಆಸರೆಯಲ್ಲಿ ಬದುಕುತ್ತಿರುವ ಮಹೇಶ್. ಚಿಕಿತ್ಸೆಗೆ ಇರಲಿ, ಒಂದು ಹೊತ್ತು ಊಟಕ್ಕು ಕಷ್ಟ ಪಡುವಂತಹ ಸ್ಥಿತಿ ಇದೆ. ಇಂಥ ಕುಟುಂಬಕ್ಕೆ ದರ್ಶನ್ ಹಾಗೂ ಆತನ ಸ್ನೇಹಿತರು ಯಾವುದೇ ರೀತಿಯ ಸಹಾಯ ಮಾಡದೇ ಮಾನವೀಯತೆಯನ್ನು ಮರೆತು ವಾಪಸ್ ಮನೆಗೆ ಬಿಟ್ಟು ಹೋಗಿದ್ದಾರೆ. ಈ ಘಟನೆ ನಡೆದು ಸುಮಾರು 9 ವರ್ಷಗಳು ಕಳೆದಿದ್ದು. ಅಲ್ಲಿಂದಲು ಸಹ ಮಹೇಶ್ ಹಾಸಿಗೆ ಹಿಡಿದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಇಂಥ ಕುಟುಂಬಕ್ಕೆ ಸಹೃದಯರು ಸಹಾಯ ಮಾಡುವ ಮೂಲಕ ಮಾನವೀಯತೆಯನ್ನು ಮೆರೆಯಬೇಕು ಎಂದು ತಿಳಿಸಿದರು.
ಹೋರಾಟಗಾರ ಆಲೂರು ಮಲ್ಲು ಮಾತನಾಡಿ, ಇಂಥ ಕ್ರೂರ ಹೃದಯಿ ದರ್ಶನ್ ಮತ್ತು ಗ್ಯಾಂಗ್‍ಗೆ ಭಗವಂತನೇ ಶಿಕ್ಷೆ ನೀಡಿದ್ದಾನೆ. ಕಳೆದ 9 ವರ್ಷಗಳ ಹಿಂದೆ ಆತನ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಗೆ ಈ ರೀತಿಯಾಗಿದ್ದರು ಸಹ ಆತನ ಚಿಕಿತ್ಸೆ ಮತ್ತು ಕುಟುಂಬ ನಿರ್ವಹಣೆಗೆ ಹಣ ನೀಡದೇ ವಂಚನೆ ಮಾಡಿರುವುದು ಸರಿಯಾದ ಕ್ರಮವಲ್ಲ. ಒಂದೊಂದು ಸಿನಿಮಾಗಳಿಗೆ ಕೋಟಿ ಕೋಟಿ ಹಣ ಪಡೆಯುವ ದರ್ಶನ್‍ಗೆ ಮಾನವೀಯತೆಯ ಮುಖವೇ ಇಲ್ಲ ಎಂಬುವುದಕ್ಕೆ ಈ ಘಟನೆ ಸಾಕ್ಷಿ. ಈಗ ಜೈಲು ಸೇರಿರುವುದು ಸಹ ಈ ಕುಟುಂಬದ ಶಾಪವೇ ಆಗಿದೆ. ಮಹೇಶ್ ಕುಟುಂಬಕ್ಕೆ ಇನ್ನು ಹೆಚ್ಚಿನ ನೆರವು ನೀಡಬೇಕು ಎಂದು ಮನವಿ ಮಾಡಿದರು.