ಲಾರಿ ಚಾಲಕ ಸಾವು: ಪುಣೆಗೆ ಶವ ಸಾಗಿಸಲು ನೆರವು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.24: ಮಹಾರಾಷ್ಟ್ರದ ಪುಣೆ ನಿವಾಸಿ, ಎಳನೀರು ವಾಹನ ಚಾಲಕ ಪ್ರಭಾಕರ್ ಚೌಧರಿ ಅವರು ಹೃದಯಘಾತದಿಂದ ಮೃತರಾಗಿದ್ದರು. ಅವರ ಮೃತ ದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯುವ ವಾಹನಕ್ಕೆ ತಗುಲುವ ವೆಚ್ಚಕ್ಕೆ ಆರ್‍ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಅವರು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಪಟ್ಟಣದ ಎಳೆನೀರು ಮಾರುಕಟ್ಟೆಗೆ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದ ಪ್ರಭಾಕರ್ ಚೌಧರಿ ಮಾರುಕಟ್ಟೆಯಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದರು. ಆದರೆ, ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಮೃತಪಟ್ಟಿದ್ದರು.
ಈ ಸಂದರ್ಭದಲ್ಲಿ ಚಾಲಕನ ಮೃತ ದೇಹವನ್ನು ಆತನ ಸ್ವಗ್ರಾಮಕ್ಕೆ ಕೊಂಡೊಯ್ಯಲು ಹಣಕಾಸಿನ ತೊಂದರೆಯಾಗಿತ್ತು. ಈ ವಿಷಯವನ್ನು ತಾಲ್ಲೂಕು ಎಳನೀರು ವರ್ತಕರ ಸಂಘದ ಪದಾಧಿಕಾರಿಗಳು ಆರ್‍ಟಿಒ ಮಲ್ಲಿಕಾರ್ಜುನ್ ಅವರ ಗಮನಕ್ಕೆ ತಂದರು. ತಕ್ಷಣ ಎಳನೀರು ವರ್ತಕರ ಮನವಿಗೆ ಸ್ಪಂದಿಸಿ ನೆರವು ನೀಡಿದ್ದಾರೆ.