ಹಬೋಹಳ್ಳಿ : ಪುರಸಭೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಅಧ್ಯಕ್ಷ ಮರಿ ರಾಮಪ್ಪ, ಉಪಾಧ್ಯಕ್ಷೆ ಅಂಬಿಕಾ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಸೆ.26 ಭಾರಿ ಕುತೂಹಲದಿಂದ ಕೂಡಿದ್ದ ಪಟ್ಟಣದ ಪುರಸಭೆಗೆ ನಡೆದ  ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಮೂಲಕ ಕಾಂಗ್ರೆಸ್ ಅಧಿಕಾರದ ಗದ್ದಿಗೆ ಏರಿದೆ.
 ದಿನಾಂಕ ನಿಗದಿಯಂತೆ ಬುಧವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ ಮರಿ ರಾಮಪ್ಪ, ಉಪಾಧ್ಯಕ್ಷರಾಗಿ ಅಂಬಿಕಾ ದೇವೇಂದ್ರಪ್ಪ ಆಯ್ಕೆಯಾದರು.
ಒಟ್ಟು 23 ಸದಸ್ಯರನ್ನು ಹೊಂದಿರುವ ಪುರಸಭೆಗೆ ಬಾಡಿ ಇಲ್ಲದೆ 2 ವರ್ಷ 9 ತಿಂಗಳ ನಂತರ ನಡೆದ  ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಎಂ. ಮರಿ ರಾಮಪ್ಪ, ಬಿಜೆಪಿಯಿಂದ ಸುರೇಶ್ ಬಣಕಾರ್ ಸ್ಪರ್ಧೆ ಮಾಡಿದ್ದರು.
12 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಯ ಇಬ್ಬರು ಸದಸ್ಯರಾದ ವಿ.ವೀರಣ್ಣ, ಮಲ್ಲೇಶ್ವರಿ ಭರತ್  ಬೆಂಬಲಿಸುವ ಮೂಲಕ ಸಂಸದ ಈ ತುಕಾರಾಂ  ಮತ ಸೇರಿ 15 ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ , ಪ್ರತಿಸ್ಪರ್ಧಿ ಬಿಜೆಪಿಯ ಅಭ್ಯರ್ಥಿಗೆ ಜೆಡಿಎಸ್ ಶಾಸಕ ಕೆ ನೇಮಿರಾಜ್ ನಾಯ್ಕ್ ಮತ ಸೇರಿ 10 ಮತಗಳು ಬಿದ್ದವು. ಕಳೆದ ಚುನಾವಣೆಯಲ್ಲಿ ಭಾರಿ ಸಂಘರ್ಷ ನಡೆದಿತ್ತು. ಈ ಬಾರಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಡಿವೈಎಸ್ಪಿ ನೇತೃತ್ವದಲ್ಲಿ 180ಕ್ಕೂ ಹೆಚ್ಚು ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಚುನಾವಣೆಯ ಅಧಿಕಾರಿಯಾಗಿ ತಹಶೀಲ್ದಾರ್ ಆರ್ ಕವಿತಾ ನಿರ್ವಹಿಸಿದ್ದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗೆಲುವು ಸಾಧಿಸುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
 ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಕಾಂಗ್ರೆಸ್ ಸದಸ್ಯರು ಸಂಭ್ರಮದಲ್ಲಿ ಪಾಲ್ಗೊಳ್ಳದೆ ಮನೆ ಕಡೆ ಮುಖ ಮಾಡಿದ್ದರು. ಕೆಎಂಎಫ್ ಅಧ್ಯಕ್ಷ ಎಸ್. ಭೀಮ ನಾಯ್ಕ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೋರಿ ಗೋಣಿಬಸಪ್ಪ ದ್ವಾರಕೀಶ್ ಮುಖಂಡರಾದ ಕೆ ಮೈಲಾರಪ್ಪ , ಕುರಿ ಶಿವಮೂರ್ತಿ,ಅಕ್ಕಿ ತೋಟೇಶ್ ರಾಮಣ್ಣ, ಚಂದ್ರಪ್ಪ, ಇತರರಿದ್ದರು