ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತರ ಕಾಯಿದೆ ಜಾರಿ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೪: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತರ ಕಾಯಿದೆ ಜಾರಿಗೆ ತರಲಾಗಿದ್ದು, ಈ ಕಾಯ್ಕೆಗೆ ಸಂಸತ್ತು ಅಂಗೀಕಾರ ನೀಡಿದ್ದು, ಈ ನಿಟ್ಟಿನಲ್ಲಿ ಸಾಮಾನ್ಯ ನೌಕರರಿಂದ ಹಿಡಿದು ಪ್ರಧಾನ ಮಂತ್ರಿಗಳು ಸಹ ಲೋಕಪಾಲ್ ಪ್ಯಾಪ್ತಿಯಡಿಯಲ್ಲಿ ಬರುತ್ತಾರೆ ಎಂದು ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ತಿಳಿಸಿದರು.ನಗರದ ಆರ್‌ಎಲ್‌ಕಾನೂನು ಕಾಲೇಜಿನಲ್ಲಿ ಐಕ್ಯೂಎಸಿ ನೇತೃತ್ವದಲ್ಲಿ ಜಿಲ್ಲಾ ವಕೀಲರ ಸಂಘ ಇವರ ಸಹಯೋಗದಲ್ಲಿ ಲೋಕಪಾಲ್ ಮತ್ತು ಲೋಕಾಯುಕ್ತರ ಕಾಯಿದೆ 2013 ಕುರಿತು ರಾಷ್ಟç ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿ ಲೋಕಪಾಲ್ ಮಸೂದೆ ಅಡಿ ಭ್ರಷ್ಠಾಚಾರ ಕಾನೂನು ಜಾರಿಗೊಳಿಸಲು ಲೋಕಪಾಲರನ್ನು ನೇಮಿಸಲಾಗಿದೆ. ಈ ಲೋಕಪಾಲ್ ಸಂಸ್ಥೆ ಸರ್ಕಾರದ ಅನುಮತಿಯಿಲ್ಲದೇಯೇ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆ ಹಾಗೂ ಶಿಕ್ಷೆಗೆ ಒಳಪಡಿಸುವ ಅಧಿಕಾರ ಹೊಂದಿದ್ದು, ಚುನಾವಣಾ ಆಯೋಗದಂತೆ ಸ್ವತಂತ್ರ ಸಂಸ್ಥೆಯಾಗಿದೆ ಎಂದು ತಿಳಿಸಿದರು.ಭ್ರಷ್ಠಾಚಾರವನ್ನು ನಿಗ್ರಹಿಸುವ ಮತ್ತು ಮಾಹಿತಿದಾರರನ್ನು ರಕ್ಷಿಸುವ ಸಲುವಾಗಿ ಈ ಕಾಯ್ದೆಯಡಿ ಸಾದ್ಯವಾಗಿದೆ ಎಂದು ಪ್ರತಿಪಾದಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್‌ಕುಮಾರ್ ಮಾತನಾಡಿ, ಸರ್ಕಾರದ ಇಲಾಖೆಗಳಲ್ಲಿ ಲಂಚದ ಹಾವಳಿ ತಡೆಯುವ ಬಗ್ಗೆ ಚರ್ಚೆಗಳು ನಡೆದು ಸಮಿತಿ ರಚನೆಯಾಗಿ ತದ ನಂತರ 2013ರಲ್ಲಿ ಭಾರದ ಸಂಸತ್ತು ಲೋಕಪಾಲ್ ಮತ್ತು ಲೋಕಾಯುಕ್ತ ಸಂಸ್ಥೆಯನ್ನು ಅಂಗೀಕರಿಸಿತು. ಸರ್ಕಾರದ ವ್ಯವಸ್ಥೆಯಲ್ಲಿ ಲಂಚದ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಕೇಂದ್ರದ ಮಟ್ಟದಲ್ಲಿ ಲೋಕಪಾಲ್ ಸಂಸ್ಥೆ, ರಾಜ್ಯಗಳ ಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸಲಾಯಿತು ಎಂದು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಆರ್.ಎಲ್.ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಜಿ.ಎಸ್.ಯತೀಶ್, ಐಕ್ಯೂಎಸಿ ಸಂಚಾಲಕ ಬಸವನಗೌಡ ಬಿ.ಪಿ. ಕಾರ್ಯಕ್ರಮದ ಸಂಯೋಜಕರಾದ ಡಾ.ಪಂಕಜಾ ಟಿ.ಸಿ, ಸಹಾಯಕ ಪ್ರಾಧ್ಯಾಪಕ ವಿಧ್ಯಾಧರ ವೇದಮೂರ್ತಿ ಟಿ.,ನಿವೃತ್ತ ಪ್ರಾಚಾರ್ಯ ಸೋಮಶೇಖರ್ ಸೇರಿದಂತೆ ಇತರರು ಇದ್ದರು.