ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರ ಜೊತೆ ಯುವ ಸಂವಾದ
ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜೂ.೨೪ : ಯುವ ಸ್ಫೂರ್ತಿ ಅಕಾಡೆಮಿ ಚಿಕ್ಕಮಗಳೂರು, ವಿಸ್ತಾರ ನ್ಯೂಸ್ ಹಾಗೂ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜು, ಗಾಜನೂರು ಇವರ ಸಹಯೋಗದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಯುವ ಸ್ಫೂರ್ತಿ ಅಕಾಡೆಮಿಯ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಯುವ ಸಂವಾದ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸುಪ್ರೀಂ ಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿಗಳಾದ ಹಾಗೂ ಕರ್ನಾಟಕ ಲೋಕಾಯುಕ್ತದ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಎನ್.ಸಂತೋಷ್ ಹೆಗಡೆಯವರು ಆಗಮಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಯುವ ಸಂವಾದ ಕಾರ್ಯಕ್ರಮವನ್ನು ನಡೆಸಿದರು. ಅವರ ಜೀವನದ ನೈಜ ಘಟನೆಗಳನ್ನು ಸ್ಮರಿಸುತ್ತಾ ಪ್ರಾಮಾಣಿಕತೆ ಹಾಗೂ ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಿಸಬೇಕಾದರೆ ವಿದ್ಯಾರ್ಥಿಗಳ ಪಾತ್ರ ಎಷ್ಟು ಮುಖ್ಯವಾಗುತ್ತದೆ ಎಂಬುದರ ಬಗ್ಗೆ ಸಂದೇಶವನ್ನು ನೀಡಿದರು ಹಾಗೂ ವಿದ್ಯಾ ಸಂಸ್ಥೆಯ ಮಕ್ಕಳ ಶಿಸ್ತಿನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾದ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ ಖ್ಯಾತ ನ್ಯಾಯವಾದಿಗಳಾದ ಶ್ರೀ ವಿಕ್ರಂ ಪಡ್ಕೆರವರು ನಿವೃತ್ತ ನ್ಯಾಯಮೂರ್ತಿಗಳ ಬಗ್ಗೆ ಕಿರುಪರಿಚಯವನ್ನು ಮಾಡುತ್ತಾ ಕಾನೂನಿನ ಅರಿವು ಮತ್ತು ಜಾಗೃತಿಯನ್ನು ಮೂಡಿಸುವ ಮಾತುಗಳಾನ್ನಾಡಿದರು.