ವಿದ್ಯುತ್ ತಗುಲಿ ಸಾವನ್ನಪ್ಪಿರುವ ಬಿದ್ದಾಪುರ ಬಾಲಕನ ಕುಟುಂಬಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್‌ ಸಾಂತ್ವನ
ಕಲಬುರಗಿ:ಜೂ.23:ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಯಲ್ಲಿ ಕರೆಂಟ್‌ ಶಾಕ್‌ನಿಂದ ಸಾವನ್ನಪ್ಪಿರುವ ಬಿದ್ದಾಪುರ ಬಡಾವಣೆಯ ನಿವಾಸಿ ಸುಭಾಶ್ಚಂದ್ರ ಅವರ ಪುತ್ರ 14 ವರ್ಷದ ಬಾಲಕ ಭೀಮಾಶಂಕರ (14) ನ ಅಕಾಲಿಕ ಸಾವು ಸಂಭವಿಸಿರು ಕಾರಣ ಭಾನುವಾರ ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲರು ಬಾಲಕನ ಮನೆಗೆ ಬೇಟಿ ನೀಡಿ ವೈಯಕ್ತಿಕವಾಗಿ ಧನ ಸಹಾಯ ಮಾಡಿ ಸಾಂತ್ವನ ಹೇಳಿದರು.
ಮಳೆ ನೀರು ನಿಂತಿರುವಲ್ಲಿ ಕರೆಂಟ್‌ ಪ್ರವಹಿಸುವ ವೈರ್‌ ತುಂಡಾಗಿ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ನೀರಿನ ನಳಕ್ಕೆ ಮೋಟಾರ್ ಹಚ್ಚುತ್ತಿದ್ದ ವೇಳೆ ಈ ಅವಘಡ ಸಂಭವಿಸಿ ಬಾಲಕ ಬಲಿಯಾಗಿದ್ದ. ಸ್ಥಳದಲ್ಲೇ ಎಲ್‌ ಆಂಡ್‌ ಟಿ ಕಂಪನಿಯವ ಸಿಬ್ಬಂದಿಗಳ ಜೊತೆಗೂ ಶಾಸಕರು ಮಾತನಾಡಿ ಅಗಲಿದ ಬಾಲಕನ ಸಹೋದರಿ ಡಿಪ್ಲೋಮಾ ಓದಿದ್ದು ಅವರಿಗೆ ಕೆಲಸ ನೀಡುವ ವಿಚಾರ ಪರಿಗಣಿಸಬೇಕು ಎಂದು ಸೂಚಿಸಿದರು.
ವಿದ್ಯುತ್ ತಗುಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದಲ್ಲಿ ಮಾನವೀಯ ಹಿನ್ನೆಲೆಯಲ್ಲಿ ಪ್ರಕರಣ ಪರಿಗಣಿಸುವಂತೆ ನೆರವು ನೀಡುವಂತೆ ಜಿಲ್ಲಾಧಿಕಾರಿಗಳಿಗೂ ಶಾಸಕರು ಮನವಿ ಮಾಡಿದ್ದಾರೆ. ಸಿಎಂ ಪರಿಹಾರ ನಿಧಿಯಿಂದಲೂ ನೆರವು ನೀಡುವ ಬಗ್ಗೆಯೂ ಶಾಸಕರು ಭರವಸೆ ನೀಡಿದ್ದಾರೆ.