ಉತ್ಸಾಹ ತುಂಬುವ ಶಕ್ತಿ ಹಬ್ಬಗಳಿಗಿದೆ :  ರಂಭಾಪುರಿ ಶ್ರೀ
ಸಂಜೆವಾಣಿ ವಾರ್ತೆ
ಬಾಳೆಹೊನ್ನೂರು-ಜೂ.೨೪;ಶ್ರಮದ ಬದುಕು ಶ್ರೇಯಸ್ಸಿಗೆ ಮೂಲ. ನೊಂದು ಬೆಂದು ಬಸವಳಿದ ಜೀವನಕ್ಕೆ ಉಲ್ಲಾಸ ಉತ್ಸಾಹ ತುಂಬುವ ಶಕ್ತಿ ಹಬ್ಬಗಳಿಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಸೋಮೇಶ್ವರ ನಗರದ ಶ್ರೀ ಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಿದ ‘ಸುಗ್ಗಿ ಹಬ್ಬ’ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಮಲೆನಾಡಿನ ಪ್ರಾಂತಗಳಲ್ಲಿ ಹಬ್ಬಗಳ ಆಚರಣೆ ವೈಶಿಷ್ಠö್ಯಪೂರ್ಣವಾಗಿರುತ್ತವೆ. ವರ್ಷವಿಡಿ ದುಡಿದು ಬಳಲಿ ಬಂದ ಜನತೆಗೆ ಹೊಸ ಹುಮ್ಮಸ್ಸು ಹಬ್ಬಗಳ ಆಚರಣೆಯಿಂದ ದೊರಕುತ್ತದೆ. ಪ್ರತಿಯೊಂದು ಹಬ್ಬದ ಆಚರಣೆಗೆ ಒಂದಿಲ್ಲ ಒಂದು ಮಹತ್ವ ಇರುವುದನ್ನು ಕಾಣುತ್ತೇವೆ. ಸಂಸ್ಕೃತಿಯ ಉಳಿವು ಹಬ್ಬಗಳ ಆಚರಣೆಯಲ್ಲಿದ್ದು ಜೀವನದ ಉತ್ಕರ್ಷತೆಗೆ ಕಾರಣವಾಗುತ್ತವೆ. ಸಾಮರಸ್ಯ ಸದ್ಭಾವನೆಗೆ ಹಬ್ಬಗಳ ಆಚರಣೆ ಇನ್ನಷ್ಟು ಬಲ ತಂದು ಕೊಡುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಶ್ವ ಬಂಧುತ್ವದ ವಿಚಾರ ಧಾರೆಗಳು ಆದರ್ಶ ಬದುಕಿಗೆ ಸ್ಫೂರ್ತಿ ಉಂಟು ಮಾಡುತ್ತವೆ. ಮನುಷ್ಯ ಕುಡಿತ, ಜೂಜು, ಗುಟಕಾ ಸರಾಯಿ ಇವುಗಳಿಂದ ಮುಕ್ತವಾಗಿ ಧರ್ಮ ಮಾರ್ಗದಲ್ಲಿ ಬಾಳಿದರೆ ಯಶಸ್ಸು ನಿಶ್ಚಿತವೆಂದ ಅವರು ದೇಹವನ್ನು ದುಡಿಮೆಗೆ ಮನಸ್ಸನ್ನು ಭಗವಂತನಿಗೆ ಅರ್ಪಿಸಿ ನಡೆದಾಗ ಜೀವನ ಸಮೃದ್ಧಗೊಳ್ಳುವುದೆಂದರು.