ಗೆಲ್ಲುತ್ತೇವೆ ಅನ್ನುವ ಅತಿಯಾದ ವಿಶ್ವಾಸವೇ ಬಿಜೆಪಿ ಅಭ್ಯರ್ಥಿ ಸೋಲಲು ಕಾರಣ
ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೨೩: ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಸ್ವಯಂಕೃತ ಅಪರಾಧ ಮತ್ತು ಅವರನ್ನು ದಾರಿತಪ್ಪಿಸಿದ ದಾವಣಗೆರೆ ಬಾಯ್ಸ್ ಕಾರಣ ಎಂದು ಬಿಜೆಪಿಯ ಹೊನ್ನಾಳಿ ಮಂಡಲ ಅಧ್ಯಕ್ಷ ಜೆ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಎಸ್.ವಿ. ರಾಮಚಂದ್ರ ನಿವಾಸದಲ್ಲಿ  ಸುದ್ದಿಗೋಷ್ಠಿ ನಡೆಸಿರುವ ದಾವಣಗೆರೆ ಬಾಯ್ಸ್ ಗಳಾದ ಪಕ್ಷದ ಮಾಜಿ ಅಧ್ಯಕ್ಷರಾದ ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್, ಮಾಜಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಬಿಜೆಪಿ ಸೋಲಲು ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತು ಮಾಡಾಳು ಮಲ್ಲಿಕಾರ್ಜುನ ಕಾರಣ ಎಂದು ದೂರುತ್ತಿರುವುದು ಸರಿಯಲ್ಲ. ಇವರೆಲ್ಲ ಸಾಕಷ್ಟು ಪರಿಶ್ರಮ ಹಾಕಿ, ಪಕ್ಷದ ಅಭ್ಯರ್ಥಿ ಪ್ರಚಾರ ಮಾಡಿದ್ದಾರೆ. ಆದರೆ, ಸಿದ್ದೇಶ್ವರ ಅವರು ಎಂ.ಪಿ. ರೇಣುಕಾಚಾರ್ಯ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ತಾವು ಗೆಲ್ಲುತ್ತೇವೆ ಅನ್ನುವ ಅತಿಯಾದ ವಿಶ್ವಾಸವೇ ಇವರು ಸೋಲಲು ಕಾರಣವಾಗಿದೆ ಹೊರತು, ದಿಲ್ಲಿ ಬಾಯ್ಸ್ ಅಥವಾ ಲಗಾನ್ ಟೀಂ ಅಲ್ಲ ಎಂದು ಸ್ಪಷ್ಟನೆ ನೀಡಿದರು.ಚನ್ನಗಿರಿ ಕಾರ್ಯಕರ್ತ ಉಮೇಶ್ ಕುಮಾರ್ ಮಾತನಾಡಿ, ಪಕ್ಷದ ಮಾಜಿ ಅಧ್ಯಕ್ಷರಾಗಿದ್ದ ಯಶವಂತರಾವ್ ಜಾಧವ್ ಅವರು ತಾವೇ ದಾವಣಗೆರೆಯಲ್ಲಿ ಪಕ್ಷ ಕಟ್ಟಿಬೆಳೆಸಿದ್ದು ಎನ್ನುವ ಮಾತನಾಡುತ್ತಾರೆ. ಆದರೆ, ಎಸ್.ಎ. ರವೀಂದ್ರನಾಥ್ ಅವಿಭಜಿತ ಜಿಲ್ಲಾಧ್ಯಕ್ಷರಾಗಿದ್ದಾಗ ಯಶವಂತರಾವ್ ಜಾಧವ್ ಎಲ್ಲಿದ್ದರು. ಈಗ ಹೊನ್ನಾಳಿ, ಚನ್ನಗಿರಿಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲು ಬೇರೆಯವರ ವಿರುದ್ಧ ಬೆರಳು ತೋರಿಸುವ ಯಶವಂತರಾವ್ ಜಾಧವ್ ಅವರ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ೨೨ ಸಾವಿರ ಮುನ್ನಡೆ ಬಂದಿರುವ ಬಗ್ಗೆ ಮೊದಲು ಮಾತನಾಡಲಿ. ತಮ್ಮ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣವನ್ನು ಮೊದಲು ಓಡಿಸಲಿ ಎಂದರು.ಫಲಿತಾಂಶದ ಬಳಿಕ ಸಿದ್ದೇಶ್ವರ ಅವರು ನಡೆಸಿದ ಕೃತಜ್ಞತಾ ಕಾರ್ಯಕ್ರಮವು ಇಡೀ ಎಂಟು ಕ್ಷೇತ್ರಗಳ ಕಾರ್ಯಕರ್ತರು, ಮುಖಂಡರಿಗೆ ನಡೆಸಿದ ಕೃತಜ್ಞತೆ ಸಮಾರಂಭ ಆಗಿರಲಿಲ್ಲ. ಬದಲಿಗೆ ಹರಿಹರ ಕ್ಷೇತ್ರಕ್ಕಷ್ಟೇ ಸೀಮಿತಗೊಂಡಂತಿತ್ತು. ಅಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಮಾತನಾಡಿದ ಹಾಲಿ ಶಾಸಕ ಬಿ.ಪಿ. ಹರೀಶ್ ತಮ್ಮ ಕ್ಷೇತ್ರವಾದ ಹರಿಹರದಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಕಾರಣವೇನು ಎಂಬುದನ್ನು ಮೊದಲು ಬಹಿರಂಗ ಪಡಿಸಬೇಕು ಎಂದರು.