ಕ್ರೀಡಾಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿದರೆ ಉನ್ನತ ಸಾಧನೆ ಸಾಧ್ಯ
ಕಲಬುರಗಿ:ಜೂ.23: ಯಾವುದೇ ರಾಷ್ಟ್ರದಲ್ಲಿ ಕ್ರೀಡಾಕ್ಷೇತ್ರ ಬೆಳವಣಿಗೆಯಾಗಬೇಕಾದರೆ, ಅಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತವಾದ ಪ್ರೋತ್ಸಾಹ ನೀಡಿದರೆ ಮಾತ್ರ ಕ್ರೀಡಾಕೇತ್ರ ಹಾಗೂ ಕ್ರೀಡಾಪಟುಗಳು ಬೆಳವಣಿಗೆಯಾಗಲು ಸಾಧ್ಯವಿದೆ. ಶ್ರೇಷ್ಠ ಕ್ರೀಡಾಪಟುಗಳು ದೇಶದ ಅಮೂಲ್ಯ ಆಸ್ತಿಯಾಗಿದ್ದು, ಅವರು ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸುತ್ತಾರೆ ಎಂದು ಕರಾಟೆ, ಯೋಗ ಪಟು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಚನ್ನಬಸಪ್ಪ ಗಾರಂಪಳ್ಳಿ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದÀ ‘ಅಂತಾರಾಷ್ಟ್ರೀಯ ಓಲಂಪಿಕ್ಸ್ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಓಲಂಪಿಕ್ಸ್‍ನಲ್ಲಿ ವಿವಿಧ ರೀತಿಯ ಕ್ರೀಡೆಗಳು ಜರುಗುತ್ತವೆ. ಕ್ರೀಡೆಯ ಮೌಲ್ಯಗಳನ್ನು ಜಾಗತಿಕ ಮಟ್ಟದಲ್ಲಿ ಸಾರಲು ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕ್ರೀಡೆಯಲ್ಲಿ ದೊಡ್ಡದು-ಸಣ್ಣದು ಎಂಬುದಿಲ್ಲ. ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಬೇಕಾದರೆ, ಅದರ ನೀತಿ-ನಿಯಮಗಳ ಬಗ್ಗೆ ಸರಿಯಾಗಿ ಅರ್ಥಮಾಡಿಕೊಂಡು, ಪೂರ್ವಸಿದ್ಧತೆಯೊಂದಿಗೆ ತೊಡಗಬೇಕು. ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಭಾಗದ ಕ್ರೀಡಾಪಟುಗಳು ಓಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ, ವಿಜೇತರಾಗುವ ಮೂಲಕ ಕೀರ್ತಿಯನ್ನು ತರಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಝಾಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖಿ, ಶಾಲೆಯ ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕರಾದ ಪೂರ್ಣಿಮಾ ಪಾಟೀಲ, ಕಾಶಮ್ಮ ಚಿನಮಳ್ಳಿ, ಪ್ರೀಯಾಂಕಾ ಪಿ.ಕೆ., ಶಿಲ್ಪಾ, ರೋಹಿತ್, ವರ್ಷಾರಾಣಿ, ಖಮರುನ್ನೀಸ್, ಚಂದ್ರಲೇಖಾ, ಸರಸ್ವತಿ, ಪ್ರೀತಿ ಜೆ.ಬಿ., ಮಲ್ಲಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.