“ನಿಯಮಿತ ಯೋಗ ಹಾಗೂ ರಾಗ ದಿಂದ ರೋಗ ದೂರ”: ಪ್ರೊ.ಚನ್ನಾರಡ್ಡಿ ಪಾಟೀಲ
ಕಲಬುರಗಿ:ಜೂ.23: ಯೋಗ ಶಿಕ್ಷಕರ ಮುಖಾಂತರ ಕಲಿತು ನಿಯಮಿತವಾಗಿ ದಿನಾಲು ಯೋಗ, ಧ್ಯಾನ ಮಾದಿದರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಸಿ ದಿನ ನಿತ್ಯದ ಕೆಲಸ ಕಾರ್ಯ ಮಾಡಲು ಉಲ್ಲಾಸ, ಉತ್ಸಾಹ ಮೂಡುತ್ತದೆ, ಅದರಲ್ಲೂ ಯುವ ವಿದ್ಯಾರ್ಥಿಗಳಿಗೆ ಓದಿನ ಒತ್ತಡವನ್ನು ನಿಭಾಯಿಸುವ ಶಕ್ತಿ ಬರುತ್ತದೆ ಎಂದು ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಹಾಗೂ ವಿಶ್ವ ಸಂಗೀತ ದಿನಾಚರಣೆಯನ್ನು ಉದ್ಘಾಟಿಸಿ ಪ್ರೊ. ಚನ್ನಾರಡ್ಡಿ ಪಾಟೀಲ ಮಾತನಾಡಿದರು. ಇಂದಿನ ದಿನಮಾನಗಳಲ್ಲಿ ತಂದೆ ತಾಯಂದಿರ ಸಣ್ಣ ಪುಟ್ಟ ಮಾತುಗಳಿಗೂ ಮಕ್ಕಳು ಮನಸ್ಸಿಗೆ ಬೇಜಾರು ಮಾಡಿಕೊಂಡು ವಿಕೋಪಕ್ಕೆ ಹೋಗುವ ಪ್ರಸಂಗಳು ಕಾಣುತ್ತೇವೆ, ಈವಕ್ಕೆಲ್ಲ ಯೋಗ, ಧ್ಯಾನ, ಲಿಂಗಪೂಜೆಯಂಥವುಗಳು ಮನಸ್ಸಿಗೆ ಮುದ ನೀಡಿ ಏಕಾಗ್ರತೆ ಉಂಟುಮಾಡುತ್ತವೆ ಎಂದರು. ಮಧುರ ಸಂಗೀತವೂ ಕೂಡ ಕುಗ್ಗಿದ ಮನಸ್ಸನ್ನು ಅರಳಿಸಿ ಜೀವನೋತ್ಸಾಹವನ್ನು ಇಮ್ಮಡಿ ಗೊಳಿಸುತ್ತದೆ ಎಂದರು.
21-ಜೂನ್-2014 ರಿಂದ ಹತ್ತು ವರ್ಷದಲ್ಲಿ ಪ್ರಪಂಚದಲ್ಲಿಯೇ ಭಾರತೀಯ ಯೋಗದ ಮಹತ್ವವನ್ನು ಸಾರಿ ದೇಶ – ವಿದೇಶಗಳಲ್ಲಿ ಯೋಗಪದ್ದತಿ, ಆಹಾರಪದ್ದತಿ, ಸಂಗೀತ – ಸಂಪ್ರದಾಯಗಳನ್ನು ಮರು ಪ್ರತಿಷ್ಠಾಪಿಸುತ್ತಿದ್ದಾರೆ. ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಿಸಿ ಭಾರತೀಯರೆಲ್ಲಾ ಪಾಲಿಸುವಂತೆ ಪ್ರೇರೇಪಿಸಿದ್ದು, ಈಗ ಜಗತ್ತೇ ಯೋಗ ಕಾರ್ಯಕ್ರಮವನ್ನು ಅನುಸರಿಸುತ್ತಿದೆ.
ಯುವ ವಿದ್ಯಾರ್ಥಿಗಳ ಆಧುನಿಕ ಜೀವನ ಶೈಲಿ ಹಾಗೂ ಅತಿಯಾದ ಕರೀದ, ಜಂಕ್ ಫುಡ್‍ದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಭ್ಯಾಸದಲ್ಲಿ ಕೂಡ ಕುಂಟಿತಗೊಳ್ಳತ್ತಲಿದ್ದಾರೆ. ಆದ್ದರಿಂದ ಯೋಗದ ಜೊತೆ ಉತ್ತಮ ಆಹಾರ ಪದ್ದತಿ, ಆಟೋಟಗಳಿಂದ ಮತ್ತು ಸಾಂಸ್ತ್ರತಿಕ ಚಟುವಟಿಕೆಗಳಿಂದ ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಬಹುದು ಎಂದು ತಿಳಿಸಿದರು ಮತ್ತು ದಿನಾಲು ಯೋಗ ಹಾಗೂ ಸಂಗೀತವನ್ನು ಸರ್ವಜ್ಞ ಶಾಲಾ ಕಾಲೇಜುಗಳಲ್ಲಿ ಕಲಿಸುತ್ತಿರುವ ಯೋಗ ಶಿಕ್ಷಕರಾದ ಗುರುರಾಜ ಜಾನ್‍ಬೋ ಹಾಗೂ ಸಂಗೀತ ಶಿಕ್ಷಕರಾದ ಪಂಚಾಕ್ಷರಿ ಕಣವಿಯವರನ್ನು ಶ್ಲಾಘಿಸಿದರು.