ಅಂಗನವಾಡಿ ನೌಕರರಿಂದ ನಾಳೆ ‘ಚಲೋ ಬೆಂಗಳೂರು’
ಸಂಜೆವಾಣಿ ವಾರ್ತೆ
ಬಳ್ಳಾರಿ,ಜೂ.23: ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿನ 1.008 ಶಾಲೆಗಳಲ್ಲಿ ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಹೊರಡಿಸಿದ ಆದೇಶ ರದ್ದುಗೊಳಿಸಲು ಆಗ್ರಹಿಸಿ
ಜೂನ್ 24ರಂದು ಸೋಮವಾರ ‘ಚಲೊ ಬೆಂಗಳೂರು’ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಫೆಡರೇಷನ್ ತಿಳಿಸಿದೆ.
ಕಲ್ಯಾಣ ಕರ್ನಾಟಕ ಸಂಯುಕ್ತ ಹೋರಾಟ ಸಮಿತಿಯ ಅಡಿಯಲ್ಲಿ ಈ ಹೋರಾಟ ನಡೆಯಲಿದೆ. ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಎಲ್‍ಕೆಜಿ – ಯುಕೆಜಿ ತರಗತಿಗಳು 1.008 ಶಾಲೆಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಇದರಂತೆ 1.008 ಶಿಕ್ಷಕರನ್ನು, ಸಹಾಯಕಿಯರನ್ನು ನೇಮಕ ಮಾಡಲು ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಅಂಗನವಾಡಿ ಕೇಂದ್ರಗಳು ಮುಚ್ಚುವ ಮತ್ತು ಅಂಗನವಾಡಿ ನೌಕರರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷೆ ಆರ್ಕಾಣಿ ತಿಳಿಸಿದ್ದಾರೆ.
ಎಲ್‍ಕೆಜಿ – ಯುಕೆಜಿಗಳನ್ನು ಅಂಗನವಾಡಿ ಗಳಲ್ಲಿಯೇ ಪ್ರಾರಂಭಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಆರಂಭಿಸಬಾರದು. ಐಸಿಡಿಎಸ್ ಯೋಜನೆಯ ಅಂಗನವಾಡಿಗಳನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗದಿರಲಿ ಎಂದು ಅವರು ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ರಾಜ್ಯದ ಸಿಎಂ ಸಿದ್ದರಾಮಯ್ಯ, ಸಚಿವರುಗಳಾದ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮಧು ಬಂಗಾರಪ್ಪ ಅವರಿಗೆ ಸವಿವರ ಮನವಿ ಸಲ್ಲಿಸಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ –
ಯುಕೆಜಿ ಆರಂಭಿಸದೆ ಅಂಗನವಾಡಿಗಳಲ್ಲಿ ಪ್ರಾರಂಭಿಸಿದಲ್ಲಿ ನಮ್ಮ ನೌಕರರಿಗೂ ಒಳಿತಾಗಲಿದೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯುರನ್ನು ಆಯ್ಕೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ, ಜೂನ್ 24 ಸೋಮವಾರದಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆರ್ಕಾಣಿ ವಿವರಿಸಿದರು. ಸಾವಿರಾರು ಜನ ಅಂಗನವಾಡಿ ಉದ್ಯೋಗಿಗಳ ಭವಿಷ್ಯಕ್ಕೆ ಕಂಟಕವಾಗಿರುವ ಈ ನಿರ್ಧಾರವನ್ನು ಸರ್ಕಾರ ಕೈಬಿಡ ಬೇಕು. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳ ಅಂಗನವಾಡಿ ಉದ್ಯೋಗಿಗಳು ಮತ್ತು ರಾಜ್ಯಮಟ್ಟದ ಸಂಘಟನೆಯ ಮುಖ್ಯಸ್ಥರು, ಎಐಟಿಯುಸಿ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈ.ಮಂಗಮ್ಮ, ಬಿ.ಎರ್ರೆಮ್ಮ, ಎಸ್.ಮಂಗಳಗೌರಿ, ಟಿ.ಇಂದಿರಾ, ಕೆ.ಜಗದೀಶ್ವರಿ, ಹಿರಿಯ ಕಾರ್ಮಿಕ ಧುರೀಣ ಎ.ಆರ್.ಎಂ ಇಸ್ಮಾಯಿಲ್ ಇದ್ದರು.
One attachment • Scanned by Gmail