ಸರ್ಕಾರಿ ಜಮೀನು ಕಬಳಿಸಿ ಅಕ್ರಮ ಮೀನು ಸಾಕಾಣಿಕೆ: ಅಧಿಕಾರಿಗಳ ದಾಳಿ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.23 ಮಾಳಾಪುರ ಗ್ರಾಮದ ಸರ್ಕಾರಿ ಈಚಲ ಪರಂ ಪೋಕು ಜಮೀನನ್ನು ಅಕ್ರಮಿಸಿ ಅನಧಿಕೃತವಾಗಿ  ಹೊಂಡ ನಿರ್ಮಾಣ ಮಾಡಿ ಮೀನು ಸಾಕಾಣಿಕೆ ಮಾಡುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ಮಾಡಿದ ಘಟನೆ ನಡೆದಿದೆ.
ತಾಲ್ಲೂಕಿನ ಮಾಳಾಪುರ ಗ್ರಾಮದ ಸರ್ವೆ ನಂಬರ್ 125 ರ ಸರ್ಕಾರಿ ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿ, ನೀರನ್ನು ಹೊಂಡದಲ್ಲಿ ಶೇಖರಿಸಿ ಮೀನು ಸಾಕಾಣಿಕೆಗೆ ಬಳಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಜಿಲ್ಲಾ ಮೀನುಗಾರಿಕೆ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ  ಜೆ.ಎಂ ವಿಶ್ವನಾಥಯ್ಯ ನೇತೃತ್ವದ ತಂಡ ದಾಳಿ ನಡೆಸಿದೆ.
ಗ್ರಾಮದ ಮೌಲಾ ಎಂಬುವವರು ಸರ್ಕಾರಿ ಜಮೀನು ಅತಿಕ್ರಮಿಸಿ 280 ಅಡಿ ಉದ್ದ ಹಾಗೂ 120 ಅಡಿ ಅಗಲದ ಕೆರೆ ನಿರ್ಮಾಣ ಮಾಡಿ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದು ಅಕ್ರಮವಾಗಿ ಮೀನು ಸಾಕಾಣಿಕೆ ಮಾಡುತ್ತಿದ್ದರು. ಅಲ್ಲದೆ ಮೀನು ಸಾಕಾಣಿಕೆಗಾಗಿ ಸತ್ತ ಕೋಳಿಗಳ ಮಾಂಸ ಹಾಗೂ ಪ್ರಾಣಿಗಳ ತ್ಯಾಜ್ಯ ಬಳಸಿ ಆಹಾರವಾಗಿ ನೀಡುತ್ತಿದ್ದರು. ಇದರಿಂದಾಗಿ ಕಿಲೋ ಮೀಟರ್ ದೂರದವರೆಗೆ ಗಬ್ಬುವಾಸನೆ ಬರುತ್ತಿತ್ತು. ಸತ್ತ ಮೀನು ತಿನ್ನಲು ಹಿಂಡು ಹಿಂಡು ನಾಯಿ ಬೀಡು ಬಿಟ್ಟಿದ್ದು ದಾಳಿಯ ಸಂದರ್ಭದಲ್ಲಿ ಕಂಡು ಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ, ಇದೇ ನೀರನ್ನು ಕುಡಿದ ಪ್ರಾಣಿ ಪಕ್ಷಿಗಳು ಸತ್ತ ಘಟನೆಗಳು ನಡೆದಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಕ್ರಮವಾಗಿ ಸರ್ಕಾರಿ ಜಮೀನನ್ನು ಅತಿಕ್ರಮಿಸಿದ್ದಲ್ಲದೆ, ಅನಧಿಕೃತವಾಗಿ ಮೀನಿನ ಕೆರೆ ನಿರ್ಮಾಣ ಮಾಡಿ ನಿಷೇಧಿತ ಆಹಾರ ಬಳಕೆ ಮಾಡುತ್ತಿದ್ದವರ ವಿರುದ್ಧ ಕ್ರಮ ಜರುಗಿಸಲು ದೂರನ್ನು ದಾಖಲಿಸಲಾಗಿದೆ ಎಂದು  ಮೀನುಗಾರಿಕೆ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ  ಜೆ.ಎಂ ವಿಶ್ವನಾಥಯ್ಯ ತಿಳಿಸಿದರು.
ದಾಳಿಯ ಸಂದರ್ಭದಲ್ಲಿ ಸಿರುಗುಪ್ಪ ಆಹಾರ ಇಲಾಖೆಯ ಶಿರಸ್ತೇದಾರ ಮಹೇಶ, ತೆಕ್ಕಲಕೋಟೆ ಕಂದಾಯ ನಿರೀಕ್ಷಕ ಸುರೇಶ್ ಬಾಬು, ಮಾಳಾಪುರ ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮಸಹಾಯಕ ಭಾಗವಹಿಸಿದ್ದರು. ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಳಾಪುರ ಗ್ರಾಮದ ಸರ್ಕಾರಿ ಜಮೀನು ಕಬಳಿಸಿ ಅಕ್ರಮವಾಗಿ ಕೆರೆ ನಿರ್ಮಿಸಿ ಮೀನು ಸಾಕಾಣಿಕೆಗೆ ಬಳಸುತ್ತಿದ್ದ ಜನರೇಟರ್, ಮೋಟರ್, ವಿದ್ಯುತ್ ತಂತಿ ಇತರೆ ಸಾಮಗ್ರಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದರು.