ಗ್ರಾಮೀಣ ಭಾಗದಲ್ಲಿ ಸಂಭ್ರಮದ ಕಾರ ಹುಣ್ಣಿಮೆ ಆಚರಣೆ
ಸಂಜೆವಾಣಿ ವಾರ್ತೆ
ಸಿರಿಗೇರಿ ಜೂ.23. ಸಿರುಗುಪ್ಪ ತಾಲೂಕು ಗ್ರಾಮೀಣ ಭಾಗದಲ್ಲಿ ಎತ್ತುಗಳ ಓಟದ ಸ್ಪರ್ಧೆಗೆ ಹೆಸರಾಗಿರುವ ಕಾರ ಹುಣ್ಣಿಮೆಯ ಹಬ್ಬವು ಸಂಭ್ರಮದಿಂದ ಆಚರಿಸಲಾಯಿತು. ಈ ವರ್ಷದ ಮುಂಗಾರು ಮಳೆಯು ಪ್ರಾರಂಭದಲ್ಲಿ ಎರಡು ಮೂರು ಸಲ ಉತ್ತಮವಾಗಿ ಮಳೆ ಸುರಿಸಿ ರೈತರಲ್ಲಿ ಉತ್ಸಾಹ ತಂದಿದ್ದ ಪರಿಣಾಮ, ಕಾರ ಹುಣ್ಣಿಮೆಗೆ ಹೆಚ್ಚಿನ ಮಹತ್ವ ಬಂದಿದ್ದು ಕಂಡು ಬಂತು. ಬೆಳಿಗ್ಗೆ ರೈತರು ತಮ್ಮ ಎತ್ತುಗಳನ್ನು ಶೃಂಗರಿಸುವ ಕಾರ್ಯಕ್ಕೆ ಇಳಿದು ಕೊಂಬುಗಳನ್ನು ಕೆತ್ತಿಸುವುದು ಕೋಡುಹಣಸುಗಳನ್ನು ಹಾಕಿಸುವುದು. ಎತ್ತುಗಳ  ಕೊಂಬುಗಳಿಗೆ ಬಗೆ ಬಗೆಯ ಬಣ್ಣ ಹಚ್ಚಿ ತಮ್ಮ ಜೋಡೆತ್ತುಗಳ ಶೃಂಗಾರವನ್ನು ಕಣ್ತುಂಬಿಕೊಳ್ಳುವುದು ಸಾಮಾನ್ಯವಾಗಿತ್ತು. ರೈತಾಪಿ ವರ್ಗದವರ ಮನೆಗಳಲ್ಲಿ ಹೋಳಿಗೆ ಸಿಹಿ ತಯಾರಿಸಿ ಬಸವಣ್ಣನಿಗೆ ಎಡೆ ಹಾಕುವುದು, ಮನೆಗಳಲ್ಲಿನ ತಮ್ಮ ಎತ್ತುಗಳಿಗೆ ಎಡೆ ಉಣಿಸುವುದು, ಕಾಯಿ ಕರ್ಪೂರಗಳಿಂದ ಪೂಜೆ ಮಾಡುವುದು ಕಂಡುಬಂತು. ಸಂಜೆ ಹೊತ್ತು ಗ್ರಾಮದ ಅಗಸೆಯ ಹತ್ತಿರ ರೈತರು ತಮ್ಮ ತಮ್ಮ ಎತ್ತುಗಳನ್ನು ಹಿಡಿದುಕೊಂಡು ಓಡುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸಿರಿಗೇರಿ ಗ್ರಾಮದ ದೊಡ್ಡಗಸೆ ಚಿಕ್ಕ ಅಗಸೆ ಮತ್ತು ಮುಖ್ಯ ಬೀದಿಗಳಲ್ಲಿ ಎತ್ತುಗಳನ್ನು ಹಿಡಿದು ಓಡಿಸುವ ದೃಶ್ಯ ಸಾಮಾನ್ಯವಾಗಿತ್ತು. ಸಿರಿಗೇರಿ ಗ್ರಾಮದಲ್ಲಿ ನಡೆದ ಎತ್ತುಗಳ ಓಟದ ಸ್ಪರ್ಧೆಯಲ್ಲಿ ದೊಡ್ಡ ಅಗಸೆಯಲ್ಲಿ ಕುರುಬರ ಮಲ್ಲಯ್ಯ ಇವರ ಎತ್ತು, ಮತ್ತು ಸಣ್ಣ ಅಗಸೆಯಲ್ಲಿ ಹೊಳಗುಂದೆ ಹೊನ್ನೂರಪ್ಪ ಎಂಬುವವರ ಎತ್ತು ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡು ಕರಿ ಹರಿದವು. ರಾತ್ರಿ ಕರಿಹರಿದ ಎತ್ತುಗಳ ಜೊತೆಗೆ ಉಳಿದ ರೈತರ ಎತ್ತುಗಳು ಸೇರಿಸಿ ಗ್ರಾಮದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ವರ್ಷ ಎರಡು ಬಿಳಿ ಬಣ್ಣದ ಎತ್ತುಗಳು ಕರಿ ಹರಿದಿರುವುದರಿಂದ ಬಿಳಿ ಧಾನ್ಯಗಳಿಗೆ, ಬೆಳೆಗಳಿಗೆ ಬಲವಂತಿಗೆ ಇರಬಹುದು, ಭತ್ತ, ಹತ್ತಿ, ಜೋಳ, ಬಿಳಿ ಹಲಸಂದಿ, ಬಿಳಿ ತೊಗರಿ, ಈ ಮಾದರಿಯ ಇತರೆ ಬೆಳೆಗಳನ್ನು ಬಿತ್ತನೆ ಮಾಡಬಹುದು ಎಂಬುವ ಲೆಕ್ಕಾಚಾರದಲ್ಲಿ ರೈತರು ಮುಳುಗಿದ್ದು ಕಂಡು ಬಂತು. ಚಿಕ್ಕ ಮಕ್ಕಳು ಯುವಕರು ತಮ್ಮ ಮನೆಯಲ್ಲಿನ ಎತ್ತುಗಳನ್ನು ಹಿಡಿದುಕೊಂಡು ಓಣಿಗಳಲ್ಲಿ ಓಡಾಡುವ ದೃಶ್ಯಗಳು ಕಾರ ಹುಣ್ಣಿಮೆಯ ಸೊಬಗನ್ನು, ಸಂಭ್ರಮವನ್ನು ತೋರುತ್ತಿತ್ತು.