ಯೋಗದಿಂದ ಮಾನಸಿಕ, ಆಧ್ಯಾತ್ಮಿಕ ಕ್ಷೇಮದ ಬಲ
ಸಂಜೆವಾಣಿ ವಾರ್ತೆ
ಸಂಡೂರು: ಜೂ: 23  ಭಾರತೀಯ ಮೂಲದಿಂದ ನಡೆದು ಬಂದ ಯೋಗವು ಇಂದು ಪ್ರಪಂಚದಾದ್ಯಂತ ಸಂಭ್ರಮದಿಂದ ಆಚರಿಸಲ್ಪಡುತ್ತದೆ.  ಆದರೆ ಇತ್ತೀಚಿಗೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ನಶಿಸಿ ಹೋಗುತ್ತಿರುವದನ್ನು ಗಮನಿಸಿದ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಂದ ಪ್ರಚೋದಿಸಲ್ಪಟ್ಟು ವಿಶ್ವದಾದ್ಯಂತ ಯೋಗಾಭ್ಯಾಸದ ಪ್ರವೃತ್ತಿಯು ಪ್ರಸರಿಸುತ್ತಲಿದೆ.  ಯೋಗವು ಅತ್ಯಂತ ಪ್ರಾಚೀನ ಕಾಲದಿಂದಲೂ ನಡೆದು ಬಂದಿದೆ ಎಂದು ಸ್ಮಯೋರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಬಹಿರ್ಜಿ ಘೊರ್ಪಡೆ ತಿಳಿಸಿದರು.
ಅವರು ಪಟ್ಟಣದ ಎಸ್.ಆರ್.ಎಸ್ ಶಾಲೆಯ ಮೈದಾನದಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನವನ್ನು  ಶಿವಪುರ ಶಿಕ್ಷಣ ಸಮಿತಿಯ ಆಧ್ಯಕ್ಷರಾದ ಯಶೋಧರ ದೇವಿ ಘೋರ್ಪಡೆಯವರು ಹಾಗು ಬಹಿರ್ಜಿ ಘೋರ್ಪಡೆ ಉದ್ಘಾಟಿಸಿ ಮಾತನಾಡಿ ಯೋಗವು ನಮ್ಮ ಜೀವನದ ಮೇಲೆ ಪ್ರತಿ ಬಿಂಬಿಸುವ ಪ್ರಭಾವದ ಪ್ರದರ್ಶನದ ಕ್ಷಣವಾಗಿದೆ.  ಯೋಗವು ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಹಾಗೂ ಆಧ್ಯಾತ್ಮಿಕ ಕ್ಷೇಮಗಳನ್ನೂ ಪ್ರಚೋದಿಸಿ ನಮ್ಮ ಬದುಕನ್ನು ಪರಿಶುದ್ಧಗೊಳಿಸಿ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಾಮರಸ್ಯವನ್ನು ತರುವ ಕ್ರಿಯೆಯಾಗಿದೆ ಕಾರಣ ಯೋಗಾಭ್ಯಾಸವನ್ನು ಪ್ರತಿದಿನದ, ಪ್ರತಿಕ್ಷಣದ ಅಭ್ಯಾಸವನ್ನು ಮಾಡುತ್ತಿರಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು.
ಶಿವಪುರ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಯಶೋಧರ ದೇವಿ ಘೋರ್ಪಡೆಯವರು ಮಾತನಾಡಿ ನಮ್ಮ ದೇಶದ ಪ್ರಧಾನಿಗಳು ಜೂನ್ 21 ರ ದಿನವನ್ನು ವಿಶ್ವ ಯೋಗ ದಿನವನ್ನಾಗಿಸಿದ್ದಾರೆ. ಯೋಗದ ಇತಿಹಾಸ ದೊಡ್ಡದು, ಯೋಗ ಎಂದರೆ ಬರಿ ಉಸಿರಾಟವಲ್ಲ ಅದೊಂದು ಜೀವನ ಕ್ರಮ, ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನವೂ ಅಭ್ಯಾಸ ಮಾಡುವಂತಾಗಬೇಕು ಎಂದು ಹೇಳಿದರಲ್ಲದೇ ಮಕ್ಕಳಿಗೆ ಯೋಗದ ಮಹತ್ವದ ಕುರಿತು ತಿಳಿಸಿದರು. 
ಯೋಗ ಗುರುಗಳಾದ ಸಂಜೀವ ಸ್ವಾಮಿಯವರು ಯೋಗ ದಿನದ ಕಾರ್ಯಕ್ರಮವನ್ನು ಅನೇಕ ಯೋಗಾಸನಗಳನ್ನು ಮಾಡುವುದರ ಮೂಲಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು, ಇದೇ ಸಂದರ್ಭದಲ್ಲಿ ಎಸ್.ಆರ್.ಎಸ್ ಶಾಲೆಯ ಪ್ರಾಂಶುಪಾಲರಾದ ಅವಿನಾಶ್ ತ್ಯಾಗಿಯವರು ವೇದಿಕೆ ಮೇಲೆ ಕೆಲವು ಅಸನಗಳನ್ನು ಮಾಡುವುದರ ಮೂಲಕ ಮಕ್ಕಳಿಗೆ ಯೋಗದ ಬಗ್ಗೆ ತಿಳಿ ಹೇಳಿದರು.  ಈ ಕಾರ್ಯಕ್ರಮದಲ್ಲಿ ಶಿವುಪುರ ಶಿಕ್ಷಣ  ಸಮಿತಿ ಮತ್ತು ಸಂಡೂರು ಎಜ್ಯುಕೇಷನ್ ಸೊಸೈಟಿಯ ಶಾಲೆಗಳಾದ ಎಸ್.ಆರ್.ಎಸ್, ಎಸ್.ಜಿ.ಆರ್.ಎಸ್, ಸಂಡೂರು ಪಾಲಿಟೇಕ್ನಿಕ್, ಎಸ್.ಇ.ಎಸ್ ವಿದ್ಯಾಮಂದಿರ, ಎಸ್.ಇ. ಎಸ್ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಛತ್ರಪತಿ ಶಿವಾಜಿ ವಿದ್ಯಾಮಂದಿರ ಪ್ರೌಢ ಶಾಲೆ ಮತ್ತು ಎಸ್.ಇ.ಎಸ್ ಬಾಲಕೀಯರ ಶಾಲೆಗಳಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಮಕ್ಕಳು ಈ ಅಂತರ್ರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.