ಯೋಗಬಲ್ಲವನಿಗೆ ರೋಗವಿಲ್ಲ ಆದರೂ ಅಳವಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ-ವಿ.ಎ. ಪಾಟೀಲ್
ಸಂಜೆವಾಣಿ ವಾರ್ತೆ
ಸಂಡೂರು:ಜೂ: 23:  ಯೋಗಬಲ್ಲವನಿಗೆ ರೋಗವಿಲ್ಲ ಎಂದು ಗೊತ್ತಿದ್ದರೂ ಸಹ ನಾವು ನಮ್ಮ ಬದುಕಿನಲ್ಲಿ ಅದನ್ನು ಅಳವಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ, ಅದರೆ ವಿದೇಶಗಳಲ್ಲಿ ಪೂರ್ಣ ಅನುಷ್ಠಾನಗೊಳಿಸುತ್ತಿದ್ದಾರೆ, ಅದ್ದರಿಂದ ನಮ್ಮ ದೇಶದ ಸಂಸ್ಕೃತಿಯಾದಂತಹ ಯೋಗವನ್ನು ನಾವು ಅನುಸರಿಸುವ ಮೂಲಕ ಉತ್ತಮ ಆರೋಗ್ಯ ಸಂಪಾದಿಸೋಣ ಎಂದು ಬಿಕೆಜಿ ಸಂಸ್ಥೆಯ ಅಧಿಕಾರಿಯಾದ ವಿ.ಎ. ಪಾಟೀಲ್ ತಿಳಿಸಿದರು.
ಅವರು ಪಟ್ಟಣದ ಬಿಕೆಜಿ ಕಛೇರಿಯ ಅವರಣದಲ್ಲಿ ಹಮ್ಮಿಕೊಂಡಿದ್ದ 10ನೇ ಅಂತರಾಷ್ಟ್ರೀಯ ಯೋಗದಿನದ ಅಂಗವಾಗಿ ಜೂನ್ 10 ರಿಂದ ಬಿಕೆಜಿ ಸಂಸ್ಥೆ ಹಮ್ಮಿಕೊಂಡಿದ್ದ ಉಚಿತ ಯೋಗ ಶಿಬಿರದಲ್ಲಿ ಪಾಲ್ಗೊಂಡು ಯೋಗದಿಂದಾಗುವ ಲಾಭಗಳನ್ನು ಕುರಿತು ತಿಳಿಸಿದರು.
ಈ ಸಂದರ್ಭದಲ್ಲಿ ಕಂಪನಿಯ ಮುಖ್ಯಸ್ಥರಾದ ಬಿ.ನಾಗನಗೌಡ ಅವರು ಮಾತನಾಡಿ ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ, ಸಿಂಧೂ ನದಿ ನಾಗರೀಕತೆಯಲ್ಲಿ ಯೋಗದ ಕುರುಹುಗಳು ದೊರೆಯುವ ಮೂಲಕ ಅದು ನಮ್ಮ ದೇಶದ ಹೆಮ್ಮೆ ಎನ್ನುವುದನ್ನು ಪ್ರಸ್ತುತ ಪಡಿಸಿವೆ, ಯೋಗವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಭೆಯಲ್ಲಿ ಮಂಡಿಸುವ ಮೂಲಕ ಇಂದು ಜಗತ್ತು ಜೂನ್ 21 ನ್ನು ಯೋಗದಿನವನ್ನಾಗಿ ಆಚರಿಸುತ್ತಿದೆ, ಕಾರಣ ಜೂನ್ 21 ರಂದು ಹಗಲಿನ ಪ್ರಮಾಣ ಜಾಸ್ತಿ ಇದ್ದು ರಾತ್ರಿ ಕಡಿಮೆ ಇರುವುದು ಬಹು ವಿಶೇಷವಾಗಿರುತ್ತದೆ, ಇಂದು ನಾವು ಇಡೀ ಕುಟುಂಬವನ್ನು ಯೋಗದಂತಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಾಗ ರೋಗಗಳಿಂದ ಮುಕ್ತರಾಗಿ ಉತ್ತಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ, ನಮ್ಮ ರಾಜ್ಯದಲ್ಲಿ ಡಾ.ರಾಜಕುಮಾರ್ ಅವರು ಕಾಮನಬಿಲ್ಲು ಚಿತ್ರದಲ್ಲಿ ಯೋಗವನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸುವ ಮೂಲಕ ಯೋಗದ ಮಹತ್ವವನ್ನು ತಿಳಿಸಿದ್ದಾರೆ, ಅದರೆ ನಾವು ಬರೀ ಅದನ್ನು ನೋಡಿ ಸಂತೋಷ ಪಟ್ಟಿದ್ದೇವೆ ಅದರೆ ಅದನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹು ಮುಖ್ಯ ಎಂದರು.
ಅಧಿಕಾರಿಗಳಾದ ವಾಸಪ್ಪ ಅವರು ಮಾತನಾಡಿ ಆರೋಗ್ಯ ದೃಷ್ಠಿಯಿಟ್ಟು ಕೊಂಡು ಯೋಗ ಮಾಡಿದರೆ ಯೋಗದಿಂದ ಸಮೃದ್ಧಿಯಾಗಲು ಸಾಧ್ಯ, ನಾವು ಚಿಕಿತ್ಸೆ ಪಡೆದರೆ ಏನೂ ಪ್ರಯೋಜನವಿಲ್ಲ ಯೋಗ ಮಾಡುವುದರಿಂದ ಫಲಕಾರಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಬಿಕೆಜಿ ಕಂಪನಿಯ ಅಧಿಕಾರಿಗಳಾದ ರಾಜಶೇಖರ ಬೆಲ್ಲದ, ಪರಶುರಾಮಮೋರೆ, ಸತ್ಯನಾರಾಯಣಶಿರ್ಕೆ, ಕೇಶವ, ಯೋಗ ಶಿಕ್ಷಕ ಶ್ರೀನಿವಾಸ, ಚೇತನ, ಹನುಮೇಶ್, ವಾಸಪ್ಪ, ಗೋಪಾಲ್.ಕೆ.ಜಿ. ಸ್ವಪ್ನಾ ಇತರ ಹಲವಾರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಿಕೆಜಿ ಗ್ಲೋಬಲ್ ಶಾಲೆಯ ವಿದ್ಯಾರ್ಥಿಗಳಿಂದ ಉತ್ತಮ ಯೋಗ ಪ್ರದರ್ಶನವನ್ನು ನೆರವೇರಿಸಿದರು.