ಯೋಗವು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅವಶ್ಯ: ಡಾ. ಜ್ಯೋತಿ ಖೋಡ್ನಾಪುರ
ವಿಜಯಪುರ,ಜೂ.23: ನಗರದ ಹೊರವಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತಾಶ್ರಯದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಬಿ.ಎಲ್.ಡಿ.ಇ. ಶರೀರಶಾಸ್ತ್ರ ವಿಭಾಗದ ಸಹ ಪ್ರ್ರಾಧ್ಯಾಪಕಿ ಡಾ. ಜ್ಯೋತಿ ಖೋಡ್ನಾಪುರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯೋಗವು ದೇಹ, ಮನಸ್ಸು ಮತ್ತು ಆತ್ಮಗಳ ಸಮ್ಮಿಲನವಾಗಿದ್ದು, ಇದನ್ನು ಪ್ರತಿಯೊಬ್ಬರು ಪ್ರತಿನಿತ್ಯ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಯೋಗವು ಶಾಂತಿಯುತ ದೇಹ ಮತ್ತು ಮನಸ್ಸನ್ನು ಸಾಧಿಸಲು ದೈಹಿಕ ಮತ್ತು ಮಾನಸಿಕ ಶಿಸ್ತುಗಳನ್ನು ಒಟ್ಟುಗೂಡಿಸುತ್ತದೆ. ಇದು ಒತ್ತಡ ನಿರ್ವಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, ಯೋಗವು ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸಿನ ಗುರಿಯನ್ನು ಹೊಂದಿರುವ ಜೀವನ ವಿಧಾನವಾಗಿದೆ. ಮನಷ್ಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಜೀವಿಯಾಗಿದ್ದು, ಈ ಎಲ್ಲಾ ಮೂರರ ನಡುವೆ ಸಮತೋಲನವನ್ನು ಅಭಿವೃದ್ಧಿಪಡಿಸಲು ಯೋಗ ಸಹಾಯ ಮಾಡುತ್ತದೆ ಎಂದರು.
ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ ಮಾತನಾಡಿ, ಯೋಗವು ಮನಸ್ಸನ್ನು ಕೇಂದ್ರಿಕರಿಸಲು ಇರುವ ಒಂದು ಪ್ರಮುಖ ವಿಜ್ಞಾನವಾಗಿದ್ದು, ಎಲ್ಲರೂ ನಿತ್ಯ ಯೋಗ, ಧ್ಯಾನ ಪ್ರಾಣಾಯಾಮಗಳನ್ನು ಸರಿಯಾಗಿ ರೂಢಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಡೀನ್ ಡಾ. ಎ. ಭೀಮಪ್ಪ ಮಾತನಾಡಿ, ನಮ್ಮ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಳೆದ ಹತ್ತು ದಿನಗಳಿಂದ ಯೋಗ ಕ್ಯಾಂಪ್ ಮಾಡಿದ್ದಾರೆ. ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.
ಯೋಗ ಅಭ್ಯಾಸದಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮತ್ತು ಚೈತನ್ಯ ಮೂಡಿಸಲು ಸಹಾಯವಾಗುತ್ತದೆ. ಸಿಬ್ಬಂದಿಗಳಿಗೆ ದೈನಂದಿನ ಕಾರ್ಯದ ಒತ್ತಡವನ್ನು ತಡೆಗಟ್ಟಿ, ಖುಷಿಯಿಂದ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ ಎಂದರು. ಶಿಬಿರದ ಆಯೋಜಿಕಿ ಡಾ. ಸಾವಿತ್ರಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಎಮ್. ವಾಯ್. ತೆಗ್ಗಿ, ಡಾ. ಎಸ್. ಹೆಚ್. ಗೋಟÁ್ಯಳ, ಡಾ. ಎಸ್. ಹೆಚ್. ಗುತ್ತರಗಿ, ಡಾ. ಜಿ. ಶ್ರೀನಿವಾಸಲು, ಡಾ. ವಿದ್ಯಾವತಿ ಯಡಹಳ್ಳಿ, ಡಾ. ಎಸ್. ಜಿ. ಅಸ್ಕಿ, ಡಾ. ರಮೇಶ ಬೀರಗೆ, ಡಾ. ಸಂಗೀತಾ ಜಾಧವ, ಡಾ. ಸಾವಿತ್ರಿ ಪಾಟೀಲ, ಡಾ. ಬಂಗಾರೆಮ್ಮ ಒಡೆಯರ, ವಿದ್ಯಾರ್ಥಿ ಮುಖಂಡರಾದ ವಿಕ್ರಮ ತುಂಬಗಿ, ರಿಹಾನ್ ಮಲ್ಲಿಕ ಹಳ್ಳೂರ, ರಕ್ಷಿತ ಬಟಕುರ್ಕಿ, ಮೌನೇಶ ಬಡಿಗೇರ, ಪ್ರಿಯಾಂಕಾ ಆನೆಕಿವಿ, ಲಕ್ಷ್ಮೀ ಬಳ್ಳೂರ, ಅಂಕಿತಾ ಬೆಳ್ಳಿಹಾರ, ಶರಣಗೌಡ ಸೇರಿದಂತೆ ಕೃಷಿ ಕಾಲೇಜಿನ ಸಮಸ್ತ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.