ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗೆ ಒತ್ತಾಯ
ಔರಾದ :ಜೂ.23: ದೈಹಿಕ ಶಿಕ್ಷಣ ಶಿಕ್ಷಕರನ್ನು ಶಿಕ್ಷಕರೆಂದು ಪರಿಗಣಿಸಬೇಕು, ಸಹ ಶಿಕ್ಷಕ, ಮುಖ್ಯ ಶಿಕ್ಷಕ ಮುಂಬಡ್ತಿ ಹಾಗೂ ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ದೈಹಿಕ ಶಿಕ್ಷಣ ಶಿಕ್ಷಕರ ಬಹು ದಿನಗಳ ಪ್ರಮುಖ ಬೇಡಿಕೆಗಳನ್ನು ರಾಜ್ಯ ಸರ್ಕಾರ ಬಗೆಹರಿಸಬೇಕು ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳು ಜುಲೈ 2024ರ ಅಂತ್ಯದ ಒಳಗಾಗಿ ಈಡೇರದೆ ವಿಳಂಬವಾದಲ್ಲಿ ಬೇಡಿಕೆಗಳು ಈಡೇರುವತನಕ ಪ್ರಸ್ತುತ ವರ್ಷದಿಂದ ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ದಿಷ್ಟಾವಧಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ತಾಲ್ಲೂಕು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ದೈಹಿಕ ಶಿಕ್ಷಣ ಶಿಕ್ಷಕರು ಒಮ್ಮತದಿಂದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಆರ್ ದೊಡ್ಡೆ ರವರಿಗೆ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಜೊಯೆಲ್ ಜೈರಾಜ್ ರವರ ಉಪಸ್ಥಿತಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಅನೀಲ ಕರಂಜೆ , ಪ್ರಧಾನ ಕಾರ್ಯದರ್ಶಿ ಸಂಗ್ರಾಮ ಪವಾರ , ಅಮೃತರಾವ ಬಿರಾದಾರ, ಯಶವಂತ ಡೊಂಬಾಳೆ, ಜ್ಞಾನೇಶ್ವರ ಪಾಟೀಲ್, ಸಂಜು ರೆಡ್ಡಿ, ಸುಭಾಷ ರೆಡ್ಡಿ, ಸಾವಿತ್ರಿಬಾಯಿ, ತುಕಾರಾಮ, ಧನಂಜಯ ಬೆನ್ನೂರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.